36 ವರ್ಷಗಳ ಬಳಿಕ ಒಂದಾದ ತಾಯಿ-ಮಗ, ಮತ್ತೊಮ್ಮೆ ಕಾರಣಿಕ ಮೆರೆದ ತುಳುನಾಡಿನ ದೈವ,

Share on social media

ಮೂಡುಬಿದಿರೆ: ಮಾನಸಿಕ ಅಸ್ವಸ್ಥತೆಗೊಂಡು ಕಳೆದ 36 ವರ್ಷಗಳ ಹಿಂದೆ ಊರು, ಮನೆಯವರ ಸಂಪರ್ಕಕ್ಕೆ ಸಿಗದೆ ದೂರವಾಗಿದ್ದ ಮನೆಯ ಹಿರಿ ಮಗ ಕಡೆಗೂ ಮನೆ ಸೇರಿದ್ದು, ಮಗನಿಗಾಗಿ ಕಾದು ಕುಳಿತ ತಾಯಿಯ ಮಡಿಲು ಸೇರಿದ್ದಾರೆ. 

Advertisements

ಇರುವೈಲು ಗ್ರಾಮದ ಕೊನ್ನೆಪದವು ಸಮೀಪದ ಮಧುವನಗಿರಿಯ ಚಂದ್ರಶೇಖರ್(ಚಂದ್ರು) 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಸುಮಾರು 7 ತಿಂಗಳು ಪತ್ರ ಮುಖೇನ ಮನೆಯವರ ಸಂರ್ಪದಲ್ಲಿದ್ದ ಅವರು, ಆ ಬಳಿಕ ಕುಟುಂಬದವರು ಹಾಗೂ ಪರಿಚಿತರ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದರು. ಮುಂಬೈಯಲ್ಲಿ 6 ತಿಂಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಚಂದ್ರಶೇಖರ್ ಅವರು ಬಳಿಕ ಮಾನಸಿಕ ಅನಾರೋಗ್ಯದಿಂದ, ದೇವಸ್ಥಾನ ಮಂದಿರಗಳಿಗೆ ತಿರುಗುತ್ತಿದ್ದರು. ಕುಟುಂಬದವರು, ಊರನ್ನು ಮರೆತು ಹೋಗುವಷ್ಟು ಅವರ ಮಾನಸಿಕ ಆರೋಗ್ಯ ಹದಗೆಟ್ಟಿತ್ತು. 

ಮರಾಠಿ ಕುಟುಂಬದ ಆಶ್ರಯ: 

ಅವರು ಮುಂಬೈಯ ಮಂದಿರ, ಊರು ಕೇರಿಗಳಲ್ಲಿ ತಿರುಗಾಡಿಕೊಂಡು 10 ವರ್ಷಗಳನ್ನು ಕಳೆದರು. ಕಳೆದ 25 ವರ್ಷಗಳ ಹಿಂದೆ ಚಂದ್ರಶೇಖರ್ ಅವರ ಪರಿಸ್ಥಿತಿಯನ್ನು ಕಂಡು ಬಾಲು ಕಾಂಬ್ಳೆಯವರ ಮರಾಠಿ ಕುಟುಂಬ, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ಬಳಿಕ ಸೂಕ್ತ ಚಿಕಿತ್ಸೆಯನ್ನು ಕೊಡಿಸಿದರು. ಬಳಿಕ ತಕ್ಕಮಟ್ಟಿಗೆ ಅವರ ಮಾನಸಿಕ ಆರೋಗ್ಯ ಸರಿಯಾಗ ತೊಡಗಿದಾಗ, ಹೊಟೇಲ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಕೆಲಸದ ಜೊತೆ ರಾತ್ರಿ ಶಾಲೆಗೆ ಹೋಗಿ ವ್ಯಾಸಂಗ ಮಾಡತೊಡಗಿದರು. ಅವರಿಗೆ ಕುಟುಂಬದ ಬಗ್ಗೆ ಯಾವುದೇ ನೆನಪು ಇಲ್ಲದಿರುವುದರಿಂದ ಇತ್ತ ಇರುವೈಲಿನಲ್ಲಿರುವ ಕುಟುಂಬದವರು ಮನೆಮಗ ಪತ್ತೆಯಾಗಿ ಹಲವಾರು ಪ್ರಯತ್ನಗಳನ್ನು ಮಾಡಿದರು. 

 *ನಿಜವಾಯಿತು ದೈವದ ನುಡಿ!* 

ಗೋಪಿ ಎಂಬವರ ಮೂವರು ಪುತ್ರ, ಇಬ್ಬರು ಪುತ್ರಿಯರಲ್ಲಿ ಹಿರಿಯವರಾದ ಚಂದ್ರಶೇಖರ್ ಅವರು, ಕುಟುಂಬದ ಜೊತೆಗೆ ಸಂಪರ್ಕ ಕಳೆದುಕೊಂಡ ಬಳಿಕ ಹಲವು ಕಡೆ ಹರಕೆಗಳನ್ನು ಹೊತ್ತಿದ್ದರು. ಕೆಲವು ತಿಂಗಳ ಹಿಂದೆ ನಡೆದ ಮಂತ್ರದೇವತೆಯ ದರ್ಶನದ ವೇಳೆ `ಮನೆ ಮಗ ಬದುಕಿದ್ದಾರೆ. ಮುಂದೆ ನಡೆಯುವ ದರ್ಶನದಲ್ಲಿ ದೈವದ ಚಾಕಿರಿ ಹಿರಿಯ ಮಗನಿಂದಲೇ ನಡೆಯಬೇಕೆಂದು ಎಂದು ಅಭಯ ನೀಡಿತ್ತು. ಆ ಬಳಿಕ ಇರುವೈಲು ಸಮೀಪದ ಕುಪ್ಪೆಟ್ಟುವಿನಲ್ಲಿ ನಡೆದ ಬ್ರಹ್ಮಕಲಶ ಸಂದರ್ಭದಲ್ಲಿ ಮುಂಬೈಯಲ್ಲಿ ನೆಲೆಸಿರುವ ಊರ ವ್ಯಕ್ತಿಯೊಬ್ಬರು ಚಂದ್ರಶೇಖರ್ ಅವರ ಸುಳಿವು ನೀಡಿದ್ದು, ಆ ಬಳಿಕ ಅವರನ್ನು ಸಂಪರ್ಕಿಸಲು ಊರವರು, ಮುಂಬೈಯಲ್ಲಿ ನೆಲೆಸಿರುವ ಪರಿಚಯಸ್ಥರು ಪ್ರಯತ್ನ ಪಟ್ಟಿದ್ದಾರೆ. ಕಡೆಗೆ ಅವರಿಗೆ ಆಶ್ರಯದ ನೀಡಿದ ಕುಟುಂಬದವರ ದೂರವಾಣಿ ಸಂಖ್ಯೆ ಲಭ್ಯವಾಗಿ ಅವರನ್ನು ಸಂಪರ್ಕಿಸಿದರು. ತನ್ನ ಕುಟುಂಬದವರ ಜೊತೆ ಸೇರಿಸಲು ಕಾಂಬ್ಳೆ ಕುಟುಂಬದವರು ಹಲವಾರು ಬಾರಿ ವ್ಯವಸ್ಥೆ ಮಾಡಿದ್ದರೂ, ಚಂದ್ರಶೇಖರ್ ಅವರು ಬರಲು ಸಾಧ್ಯವಾಗಿಲ್ಲ. ಆದರೆ ಕಡೆಗೂ ಈ ಬಾರಿ ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಅವರು ಮನೆ ಸೇರಿದ್ದಾರೆ. ಇಲ್ಲಿ ಬರುವವರೆಗೂ ಅವರ ಮಾನಸಿಕ ಆರೋಗ್ಯದಲ್ಲಿ ತುಸು ವ್ಯತ್ಯಾಸಗಳಿದ್ದು, ಮನೆಗೆ ಬಂದ ಬಳಿಕ ಭಾಗಶಃ ಗುಣಮುಖರಾಗಿದ್ದಾರೆ. 


Share on social media

Leave a Reply

Your email address will not be published. Required fields are marked *

You cannot copy content of this page