ಲೋಕಾಯುಕ್ತ ದಾಳಿ: ಅಂಬೇಡ್ಕರ್ ನಿಗಮದ ಮೂವರ ಬಂಧನ

ಮಡಿಕೇರಿ: ಮಹಿಳಾ ಫಲಾನುಭವಿಯೊಬ್ಬರಿಂದ 10 ಸಾವಿರ ರೂ. ಹಣವನ್ನು ಲಂಚ ರೂಪದಲ್ಲಿ ಸ್ವೀಕರಿಸುತ್ತಿದ್ದ ಸಂದರ್ಭ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ, ಓರ್ವ ಮಹಿಳಾ ಕಚೇರಿ ನಿರ್ದೇಶಕಿ ಸಹಿತ ವಾಹನ ಚಾಲಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ನಿಗಮದ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಕಚೇರಿ ನಿರ್ದೇಶಕಿ ಚೆಲುವಾಂಬ ಮತ್ತು ವಾಹನ ಚಾಲಕ ತಿರುಮಲೇಶ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಹಿನ್ನೆಲೆ: ಅಂಬೇಡ್ಕರ್ ಅಭಿವೃದ್ದಿ ನಿಗಮದ ಮೂಲಕ 3 ಲಕ್ಷ ರೂ.ಗಳ ಸಬ್ಸಿಡಿ ಆಧಾರಿತ ಸಾಲ ಯೋಜನೆಗೆ ಮಹಿಳೆಯೊಬ್ಬರು ಕೋಳಿ ಅಂಗಡಿ ಮಾಡುವ ಉದ್ದೇಶದಿಂದ 2021ರ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ಮಹಿಳೆಗೆ ಮೊದಲ ಹಂತದಲ್ಲಿ ಹಣ ಪಾವತಿಯಾಗಿತ್ತು ಎನ್ನಲಾಗಿದೆ. 2ನೇ ಹಂತದ 1 ಲಕ್ಷ ರೂ. ಹಣ ಪಾವತಿಸಲು ಅಧಿಕಾರಿಗಳಾದ ಚಂದ್ರಶೇಖರ್, ಕಚೇರಿ ನಿರ್ದೇಶಕಿ ಚೆಲುವಾಂಬ ಮತ್ತು ವಾಹನ ಚಾಲಕ ತಿರುಮಲೇಶ್ ಅವರುಗಳು 10 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಫಲಾನುಭವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಸೋಮವಾರ ದೂರುದಾರರಿಂದ ಹಣ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ 3 ಮಂದಿ ಆರೋಪಿಗಳನ್ನು ಹಣ ಸಹಿತ ಬಂಧಿಸಿದ್ದಾರೆ. ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಐ.ಜಿ.ಪಿ. ಸುಬ್ರಮಣ್ಯೇಶ್ವರ ರಾವ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್, ಮಡಿಕೇರಿ ಲೋಕಾಯುಕ್ತ ಇನ್ಸ್‍ಪೆಕ್ಟರ್ ಲೋಕೇಶ್, ಮೈಸೂರು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಾಶ್ರೀ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದೂರುದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯೋಜನೆಯೊಂದರಲ್ಲಿ 3 ಲಕ್ಷ ರೂ.ಗಳ ಸಬ್ಸಿಡಿ ಆಧಾರಿತ ಸಾಲ ಯೋಜನೆಗೆ ಅಂಬೇಡ್ಕರ್ ಅಭಿವೃದ್ದಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಮೊದಲ ಹಂತದ ಹಣ ಪಾವತಿಯಾಗಿದ್ದು, 2ನೇ ಹಂತದ ಹಣ ಪಾವತಿಗೆ ಈ 3 ಮಂದಿ 10 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಯೋಜನೆಯ ಫಲಾನುಭವಿ ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಲೋಕಾಯುಕ್ತದ ಹಿರಿಯ ಅಧಿಕಾರಿಗಳಿಗೆ ಸಮಗ್ರ ವಿವರ ನೀಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಮೈಸೂರು ಲೋಕಾಯುಕ್ತ ಎಸ್.ಪಿ.ಸುರೇಶ್ ಬಾಬು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ