ಗುಣಮಟ್ಟಕೆ ಹೆಸರುವಾಸಿಯಾಗಿರುವ ನಿಧಿಲ್ಯಾಂಡ್ ನೂತನ ಕಚೇರಿ ಉದ್ಘಾಟನೆ

ಜಯಕಿರಣ ವರದಿ
ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಸಾಕಷ್ಟು ಅಭಿವೃದ್ಧಿ ಕಂಡಿರುವ ಮಂಗಳೂರು ನಗರಕ್ಕೆ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲು ಶ್ಲಾಘಿಸಿದರು. ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿರುವ ನ್ಯೂ ಬೆರ್ರಿ ಎನ್‌ಕ್ಲೇವ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆಯಾಗಿರುವ ‘ನಿಧಿಲ್ಯಾಂಡ್’ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಂಗಳೂರಿನಲ್ಲಿ ಶೀಘ್ರದಲ್ಲೇ ೧೦೦೦ ಕೋಟಿ ರೂಪಾಯಿ ಯೋಜನೆಯ ಪ್ಲಾಸ್ಟಿಕ್ ಪಾರ್ಕ್ ಅನುಷ್ಠಾನಗೊಳ್ಳಲಿದ್ದರೆ, ೩೨ ಕೋಟಿ ರೂಪಾಯಿಗಳ ಪೆಟ್ರೋಲಿಯಂ ಉತ್ಪನ್ನಗಳ ತಯಾರಿ ಘಟಕದ ಯೋಜನೆ ಮಂಜೂರಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಬಡವರಿಗೆ ಮನೆ ನಿರ್ಮಾಣ ಯೋಜನೆಯ ಯಶಸ್ಸಿಗೆ ಬಿಲ್ಡರ್‌ಗಳ ಸಹಕಾರ ಅಗತ್ಯ ಎಂದು ತಿಳಿಸಿದರು.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ನೂತನ ಕಚೇರಿ ಉದ್ಘಾಟಿಸಿ, ನಿಧಿ ಲ್ಯಾಂಡ್ ಬಿಲ್ಡರ್ ಸಂಸ್ಥೆ ಮಂಗಳೂರಿನ ಉದ್ಯಮ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿದೆ. ಈ ಸಂಸ್ಥೆ ಇನ್ನಷ್ಟು ಯಶಸ್ಸಿನತ್ತ ಸಾಗಲಿ ಎಂದು ಹಾರೈಸಿದರು.ಕ್ರೆಡೈ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಕೋವಿಡ್ ಸಂದರ್ಭದಲ್ಲಿ ಪ್ರಶಾಂತ್ ಸನಿಲ್ ಅವರ ಕೊಡುಗೆಯನ್ನು ಸ್ಮರಿಸಿದರು.ಮಂಗಳೂರು ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಶ್ವೇಶ್ವರಿಜೀ ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮುಡಾದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸದಸ್ಯ ಲ್ಯಾನ್ಸ್ ಲಾಟ್ ಪಿಂಟೊ, ಇಂಡಿಯನ್ ರೆಡ್ ಕ್ರಾಸ್ ಸಭಾಪತಿ ಸಿ.ಎ.ಶಾಂತಾರಾಮ ಶೆಟ್ಟಿ, ಹೊಸದಿಂಗತದ ಸಿಇಒ ಪ್ರಕಾಶ್, ಸನಿಲ್ ಕುಟುಂಬದ ಸದಸ್ಯರಾದ ಮಾಧವ ಸುವರ್ಣ, ಶರತ್ ಚಂದ್ರ ಸನಿಲ್, ನಯನಾ ಸನಿಲ್ ಉಪಸ್ಥಿತರಿದ್ದರು.ಈ ವೇಳೆ ಸಂಸ್ಥೆಯ ಸಲಹೆಗಾರ ಧರ್ಮರಾಜ್ ಅವರನ್ನು ಸನ್ಮಾನಿಸಲಾಯಿತು. ನಿಧಿಲ್ಯಾಂಡ್ ಯೋಜನೆಯ ಕಾರ್ಯ ಯೋಜನೆಯಲ್ಲಿ ಸಹಕರಿಸಿದ ಮಧುಕರ್, ಅಶೋಕ್ ರಾಜ್, ಸಿಪ್ರಿಯನ್, ಧೀರಜ್, ಕಿಶೋರ್, ಐವನ್ ಲೋಬೊ, ಸುಧೀರ್ ಪ್ರಭು, ಪ್ರದೀಪ್, ಮಹೇಶ್, ನವಾಝ್, ರಾಮ್ ಪಾಲ್, ದಿಲೀಪ್, ಸುಭಾಷ್, ರಾಮು, ದಿನೇಶ್ ಮೊದಲಾದವರಿಗೆ ಸ್ಮರಣಿಕೆ ಗೌರವಿಸಲಾಯಿತು.ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ವಂದಿಸಿದರು.‘ಕಳೆದ ೧೦ ವರ್ಷಗಳಲ್ಲಿ ನಿಧಿಲ್ಯಾಂಡ್ ಸಂಸ್ಥೆಯ ಮೂಲಕ ೧೧ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಗ್ರಾಹಕರ ವಿಶ್ವಾಸ, ನಂಬಿಕೆ, ಸಂಸ್ಥೆಯ ಸಿಬ್ಬಂದಿ ಸಹಕಾರ ಸಹಿತ ಹಲವಾರು ಕೈಗಳ ಸೇರುವಿಕೆಯಂಥ ಸಾಮೂಹಿಕ ಪ್ರಯತ್ನದಿಂದ ಯೋಜನೆಗಳು ಯಶಸ್ವಿಯಾಗಲು ಕಾರಣ’ಪ್ರಶಾಂತ್ ಕೆ.ಸನಿಲ್, ವ್ಯವಸ್ಥಾಪಕ ನಿರ್ದೇಶಕರು, ನಿಧಿ ಲ್ಯಾಂಡ್ ಸಂಸ್ಥೆ
