ಕೊಡಗು: ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

ಮಡಿಕೇರಿ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಕೊಡಗು ಜಿಲ್ಲಾ ಬಾಂಬ್ ನಿಷ್ಕ್ರೀಯ ದಳ ಜನನಿಬಿಡ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತು. ಕೆ ಎಸ್ ಆರ್ ಟಿ ಸಿ ಹಾಗೂ ಖಾಸಗಿ ಬಸ್ ನಿಲ್ದಾಣ, ಮಾರುಕಟ್ಟೆ ಆವರಣ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಪ್ರವಾಸಿ ತಾಣಗಳಲ್ಲಿ ಅನುಮಾನಾಸ್ಪದ ವಸ್ತುಗಳ ಕುರಿತು ಶೋಧ ಕಾರ್ಯ ನಡೆಸಿತು.ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಮೈಸೂರು ಮೂಲಕ ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್’ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಿ.ಸಿ. ಕ್ಯಾಮರಾಗಳ ಮೂಲಕ ನಿಗಾ ವಹಿಸಲಾಗಿದೆ. ಗುಪ್ತಚರ ಇಲಾಖೆ ನಿರ್ದೇಶನ: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ, ಗುಪ್ತಚರ ಇಲಾಖೆ ನಿರ್ದೇಶನದಂತೆ ಬಾಂಬ್ ನಿಷ್ಕ್ರೀಯ ದಳ ಶೋಧ ಕಾರ್ಯ ನಡೆಸಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಮಂಗಳೂರು ಘಟನೆ ಹಾಗೂ ಬಾಂಬ್ ನಿಷ್ಕ್ರಿಯ ದಳದ ಶೋಧ ಕಾರ್ಯ ಕೇವಲ ಕಾಕತಾಳೀಯವಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪೂರ್ವಭಾವಿಯಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಗಳ ಜೊತೆ ನಿರಂತರ ಸಂಪರ್ಕ ಹೊಂದಿಕೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೆಚ್ಚಿನ ವಿವರಗಳಿಗಾಗಿ ಇಂದಿನ ಜಯಕಿರಣ ದಿನ ಪತ್ರಿಕೆ ಓದಿರಿ