ಅಸಮರ್ಪಕ ಕಾಮಗಾರಿ-ಸುಪ್ರೀಂ ನ್ಯಾಯಮೂರ್ತಿ ಕೆಂಡಾ ಮಂಡಲ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಲೋಕಾಯುಕ್ತ ತನಿಖೆಯ ಎಚ್ಚರಿಕೆ

ಮೂಡಬಿದಿರೆ : ವಕೀಲರ ಭವನದ ಕಾಮಗಾರಿ ವೀಕ್ಷಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಬ್ದುಲ್ ನಝೀರ್‌ರವರು ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣ ಹಂತದ ವಕೀಲರ ಭವನದ ಕಾಮಗಾರಿಯ ವೀಕ್ಷಣೆಗೆ ನ್ಯಾಯಮೂರ್ತಿ ಅಬ್ದುಲ್ ನಝೀರ್ ನಿನ್ನೆ ದಿಡೀರ್ ಬೇಟಿ ನೀಡಿದ್ದು, ಕಳಪೆ ಮತ್ತು ಅಸಮರ್ಪಕ ಕಾಮಗಾರಿ ಕಂಡು ಗರಂ ಆದರು. ಗುತ್ತಿಗೆದಾರರಿಗೆ ಪೂರ್ವ ಮಾಹಿತಿ ಇದ್ದರೂ ಹಾಜರಿರಲಿಲ್ಲ ಎನ್ನಲಾಗಿದ್ದು, ಇದು ನ್ಯಾಯಾಧೀಶರ ಕೋಪವನ್ನು ಇಮ್ಮಡಿಗೊಳಿಸಿದೆ ಎನ್ನಲಾಗಿದೆ.ಕಳಪೆ ಗುಣಮಟ್ಟದ ಟೈಲ್ಸ್, ಅವೈಜ್ಞಾನಿಕ ಕಾಮಗಾರಿಯನ್ನು ಒಡೆದು ಸರಿಪಡಿಸುವಂತೆ ಇಂಜಿನಿಯರ್‌ಗೆ ತಾಕೀತು ಮಾಡಿದ್ದಾರೆ.

ದನದ ಕೊಟ್ಟಿಗೆಗೆ ಅಳವಡಿಸುವ ಸಾಮಾಗ್ರಿಗಳನ್ನು ಬಳಕೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿ, ಗುತ್ತಿಗೆದಾರ ಬಿಮಲ್ ನ ಪ್ರವೀಣ್‌ನನ್ನು ಕಪ್ಪು ಪಟ್ಟಿಗೆ ಸೇರಿಸಿ ಐದು ವರ್ಷ ಯಾವುದೇ ಗುತ್ತಿಗೆ ಕೊಡದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವ್ಯವಾಹಾರದ ಸುಳಿವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆಕ್ರೋಶಗೊಂಡ ನ್ಯಾಯಮೂರ್ತಿಗಳು, ನ್ಯಾಯಾಧೀಶರಿಗೆ ಎಲ್ಲಾ ವಿಧದ ಪರಿಜ್ಞಾನವೂ ಇರುತ್ತದೆ. ನಮಗೆ ಸತ್ಯಾಂಶ ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಪರೋಕ್ಷಾಗಿ ಕಿಡಿಕಾರಿದ್ದಾರೆ.ಕೊನೆ ಕ್ಷಣದಲ್ಲಿ ಗುತ್ತಿಗೆದಾರ ಆಗಮಿಸಿದ್ದು, ನನ್ನ ತವರೂರಿನಲ್ಲಿ ಈ ರೀತಿ ನಡೆದಿರುವುದರಿಂದ ನನ್ನ ಮನಸ್ಸಿಗೆ ಅತೀವ ನೋವಾಗಿದೆ ಎಂದ ಅವರು, ಗುತ್ತಿಗೆದಾರನ ಮುಖವನ್ನೂ ನೋಡದೆ ಹಿಂತಿರುಗಿದ್ದಾರೆ. ಜಿಲ್ಲಾ ಮುಖ್ಯ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು, ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *