ಮೂಲ್ಕಿ: ರಿಕ್ಷಾ ಚಾಲಕನ “ಅಬತರ”ಕ್ಕೆ ಪೊಲೀಸ್, ನಾಗರಿಕರು ಕಂಗಾಲು!!

ಸುರತ್ಕಲ್: ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡು ಜಂಕ್ಷನ್ ನಲ್ಲಿ ರಿಕ್ಷಾ ಪಾರ್ಕ್ ಮಾಡುವ ರಿಕ್ಷಾ ಚಾಲಕನೋರ್ವನ “ಅಬತರ”ದಿಂದ ಗಂಟೆಗಳ ಕಾಲ ಮೂಲ್ಕಿ ಪೊಲೀಸರು, ನಾಗರಿಕರು ಆತಂಕಕ್ಕೊಳಗಾದ ಘಟನೆ ಇಂದು ಸಂಜೆ ನಡೆದಿದೆ.ನಡೆದಿದ್ದೇನು?ರಿಕ್ಷಾ ಚಾಲಕ ಹರಿಪ್ರಸಾದ್ ಎಂಬಾತನ ಸಂಸಾರದಲ್ಲಿ ಬಿರುಕು ಉಂಟಾಗಿದ್ದು ಪತ್ನಿಯ ಜೊತೆ ವೈಮನಸ್ಸು ಸೃಷ್ಟಿಯಾಗಿತ್ತು. ಕಾರ್ನಾಡ್ ಸಿ ಎಸ್ ಐ ಇಂಗ್ಲಿಷ್ ಮೀಡಿಯಂ ಸ್ಕೂಲ್ ಎರಡನೇ ತರಗತಿಯಲ್ಲಿ ಮಗ ಶ್ಯಾಮ್ ಕಲಿಯುತ್ತಿದ್ದು ಇಂದು ಮುಂಜಾನೆ ಶಾಲೆಗೆ ಬರುತ್ತಿದ್ದ ಮಗನನ್ನು ಹರಿಪ್ರಸಾದ್ ತನ್ನ ರಿಕ್ಷಾದಲ್ಲಿ ಕರೆದೊಯ್ದಿದ್ದ. ಮಧ್ಯಾಹ್ನ ಸುಮಾರಿಗೆ ಮಗ ಶ್ಯಾಮ್ ಶಾಲೆಗೆ ಹೋಗಿಲ್ಲ ಎಂದು ತಿಳಿದು ತಾಯಿ ಗಾಬರಿಗೊಂಡು ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಾರ್ನಾಡ್ ಜಂಕ್ಷನ್ ಪಕ್ಕದ ಸಿಸಿ ಕೆಮಾರ ಪರಿಶೀಲಿಸಿದ ವೇಳೆ ಶ್ಯಾಮ್ ನನ್ನು ತಂದೆ ಹರಿಪ್ರಸಾದ್ ಕರೆದೊಯ್ದಿರುವುದು ಬೆಳಕಿಗೆ ಬಂದಿತ್ತು. ಆದರೆ ಅಷ್ಟರಲ್ಲಿ ಶಾಲಾ ಬಾಲಕ ನಾಪತ್ತೆ ಸುದ್ದಿ ರೆಕ್ಕೆಪುಕ್ಕ ಕಟ್ಟಿಕೊಂಡು ಎಲ್ಲಾ ಕಡೆ ಹರಿದಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಿತ್ತು. ಪೊಲೀಸರು ಎಲ್ಲಾ ಕಡೆ ಹುಡುಕಾಡಿದ್ದರು. ಕೊನೆಗೆ ಸಂಜೆಯ ವೇಳೆ ಹರಿಪ್ರಸಾದ್, ಶ್ಯಾಮ್ ಇಬ್ಬರೂ ಮೂಲ್ಕಿ ಪೊಲೀಸ್ ಠಾಣೆಗೆ ಆಗಮಿಸಿದ್ದು ಈ ವೇಳೆ ಪೊಲೀಸರನ್ನೇ ಯಾಮಾರಿಸಲು ಹರಿಪ್ರಸಾದ್ ಮುಂದಾದ ಘಟನೆಯೂ ಜರುಗಿದೆ. ರಿಕ್ಷಾ ಚಾಲಕನಾಗಿರುವ ಹರಿಪ್ರಸಾದ್ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನ ಹೊಂದಿದ್ದು ಸಿ ಎಸ್ ಐ ಶಾಲೆಗೆ ಮಧ್ಯಾಹ್ನ ಊಟವನ್ನು ತನ್ನ ವಾಹನದಲ್ಲೇ ಪೂರೈಸುವ ಜವಾಬ್ದಾರಿ ಹೊತ್ತಿದ್ದ. ಈತನ ಅವಾಂತರದಿಂದಾಗಿ ಮಕ್ಕಳು ಮಧ್ಯಾಹ್ನದ ಊಟಕ್ಕೂ ಗಂಟೆಗಳ ಕಾಲ ಕಾಯುವಂತಾಯಿತು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಮಹತ್ತರ ಜವಾಬ್ದಾರಿ ಹೊಂದಿರುವವನೇ ತನ್ನ ಮಗನನ್ನು ಅಪಹರಿಸಿದ ಪ್ರಸಂಗ ಪೋಷಕರ ಆತಂಕಕ್ಕೆ ಕಾರಣವಾಗಿದ್ದು ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.