ವಿವಾದಕ್ಕೆ ಕಾರಣವಾದ ಯುವಕರ ನೃತ್ಯ: ಮುಸ್ಲಿಂ ಮುಖಂಡರ ಅಸಮಾಧಾನ

ಮಡಿಕೇರಿ: ಹಿಜಾಬ್ ಹಾಗೂ ಬುರ್ಕಾವನ್ನು ಹೋಲುವ ರೀತಿಯ ಬಟ್ಟೆ ಧರಿಸಿ ಯುವಕರ ತಂಡವೊಂದು ವಾಲಗ ಸದ್ದಿಗೆ ನೃತ್ಯ ಮಾಡಿದ ವಿಡಿಯೋ ತುಣುಕೊಂದು ಕೊಡಗಿನಲ್ಲಿ ವಿವಾದ ಸೃಷ್ಟಿಸಿದೆ.ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಯುವಕರ ತಂಡವೊಂದು ನೃತ್ಯ ಮಾಡಿತ್ತು. ಈ ಸಂದರ್ಭದಲ್ಲಿ ಹಿಜಾಬ್ ಹಾಗೂ ಬುರ್ಕಾವನ್ನು ಹೋಲುವ ರೀತಿಯ ಬಟ್ಟೆ ಧರಿಸಿ ನೃತ್ಯ ಮಾಡಲಾಗಿತ್ತೆನ್ನಲಾಗಿದ್ದು, ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ನೃತ್ಯಕ್ಕೆ ಆಕ್ಷೇಪ ವ್ಯಕ್ತ ವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ಮುಸ್ಲಿಮರ ಭಾವನೆಗಳಿಗೆ ಧಕ್ಕೆ: ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ, ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವ ಸಮಾರಂಭದಕಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಸಲ್ಮಾನರ ಸಾಂಪ್ರದಾಯಿಕ ಬುರ್ಕಾ ಹಾಗೂ ಶಿರವಸ್ತ್ರವನ್ನು ಧರಿಸಿ ನರ್ತಿಸುವ ಮೂಲಕ ಮುಸಲ್ಮಾನರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದೆ.ಪತ್ರಿಕಾ ಹೇಳಿಕೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಬುರ್ಕಾ ಮತ್ತು ಶಿರವಸ್ತ್ರವನ್ನು ಧರಿಸಿ ವೇದಿಕೆಯಲ್ಲಿ ನರ್ತಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ ಭಾವನೆಗೆ ನೋವುಂಟು ಮಾಡಿದವರ ವಿರುದ್ಧ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಯಾವುದೇ ಜಾತಿ, ಧರ್ಮ, ವರ್ಗದ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಗೆ ಧಕ್ಕೆ ತರುವ ಕಾರ್ಯ ಯಾರಿಂದಲೂ ಆಗಬಾರದು. ಪರಸ್ಪರ ಎಲ್ಲಾ ಸಂಪ್ರದಾಯವನ್ನು ಗೌರವಿಸುವ ಭಾವನೆ ಮೂಡಬೇಕೇ ಹೊರತು ಮತ್ತೊಬ್ಬರ ಭಾವನೆಗೆ ನೋವುಂಟು ಮಾಡುವ ಕೆಲಸವಾಗಬಾರದು. ಮುಂದಿನ ದಿನಗಳಲ್ಲಿ ಕೊಡಗಿನ ಸೌಹಾರ್ದತೆಗೆ ಧಕ್ಕೆ ತರುವ ಯಾವ ಶಕ್ತಿಗಳಿಗೂ ಕಾರ್ಯಕ್ರಮಗಳ ಆಯೋಜಕರು ಅವಕಾಶ ನೀಡಬಾರದು ಮತ್ತು ಕೊಳಕೇರಿ ಪ್ರಕರಣದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಸ್ಮಾನ್ ಒತ್ತಾಯಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ದಿನ ಪತ್ರಿಕೆ ಓದಿರಿ

Leave a Reply

Your email address will not be published. Required fields are marked *