ಚಹಾ- ಚಟ್ಟಂಬಡೆಗೆ ಸೀಮಿತವಾದ ತಲಪಾಡಿ ವಿಶೇಷ ಗ್ರಾಮಸಭೆ !

ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ ವಿಶೇಷ ಗ್ರಾಮಸಭೆ ಕೇವಲ ಚಹಾ- ಚಟ್ಟಂಬಡೆಗೆ ಮಾತ್ರ ಸೀಮಿತವಾಯಿತು. 24 ಗ್ರಾ.ಪಂ ಸದಸ್ಯರ ಪೈಕಿ 4 ಮಂದಿ ಸದಸ್ಯರು ಹಾಗೂ ಪ್ರಮುಖವಾಗಿ ಭಾಗವಹಿಸಬೇಕಾಗಿದ್ದ 14-15 ನೇ ಹಣಕಾಸು ಯೋಜನೆಯ ಅಧಿಕಾರಿಯೇ ಇಲ್ಲದೆ ಗ್ರಾಮಸ್ಥರ ವಿರೋಧಕ್ಕೆ ಸಭೆ ಅರ್ಧದಲ್ಲೇ ರದ್ದುಗೊಂಡಿದೆ.

ಅಕ್ಷರದಾಸೋಹ ಮಂಗಳೂರು ಇದರ ಸಹಾಯಕ ನಿರ್ದೇಶಕಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಗೈರಾಗಿದ್ದರು. ಅದಕ್ಕಾಗಿ ಸಭೆಯಲ್ಲಿ ಭಾಗವಹಿಸಿದ 60 ವರ್ಷ ಪ್ರಾಯ ಮೇಲ್ಪಟ್ಟ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಅಧಿಕಾರಿ ಸೂಚಿಸಿದರು. ಆದರೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ 11.30 ಆದರೂ ಆರಂಭವಾಗಿಲ್ಲ, 14-15 ನೇ ಹಣಕಾಸು ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ 2021-22 ನೇ ಸಾಲಿನ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮಸಭೆ ಆಗಿರುವುದರಿಂದ 14-15 ನೇ ಹಣಕಾಸು ಯೋಜನೆ ಇಂಜಿನಿಯರ್ ಅವರ ಭಾಗವಹಿಸುವಿಕೆ ಅಗತ್ಯ. ಅವರೇ ಇಲ್ಲದಿದ್ದಲ್ಲಿ ಸಭೆಯಿಂದ ಮಾಹಿತಿ ಸಿಗುವುದು ಅಸಾಧ್ಯ. ಈವರೆಗೆ ಯೋಜನೆಯಡಿ ನಡೆಸಲಾದ ಕಾಮಗಾರಿಯ ಪರಿಶೀಲನೆಗೂ ಇಂಜಿನಿಯರ್ ಭೇಟಿ ಕೊಟ್ಟಿಲ್ಲ. ಕಾಮಗಾರಿಗಳೆಲ್ಲವೂ ಕಳಪೆಯಿಂದ ಕೂಡಿದೆ. ನಾಲ್ಕು ವರ್ಷಗಳಿಂದ ಇಂಜಿನಿಯರ್ ನಾಪತ್ತೆಯಾಗಿದ್ದಾರೆ. ಈವರೆಗೂ ಕೋರ್ ವೆಲ್ ರಚನೆಯಾಗಿಲ್ಲ. ಇಂಜಿನಿಯರ್ ಬಾರದೇ ಇದ್ದಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಯಶು ಪಕಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಗ್ರಾಮಸ್ಥ ಅಬ್ಬಾಸ್ ಉಚ್ಚಿಲ್ ಅವರು ದನಿಗೂಡಿಸಿದರು. ಈ ಹಿಂದೆ ನಡೆದ ಗ್ರಾಮಸಭೆಯಲ್ಲೂ ಇದೇ ವಿಚಾರಕ್ಕೆ ಸಂಬಂಧಿಸಿ ಗದ್ದಲಗಳು ಉಂಟಾದಾಗ ಗ್ರಾಮ 24 ಮಂದಿ ಸದಸ್ಯರು ಮುಂದಿನ ಸಭೆಯಲ್ಲಿ ಇಂಜಿನಿಯರ್ ಅವರನ್ನು ಕರೆಸುವ ವಿಶ್ವಾಸ ನೀಡಿದ್ದರು. ಆದರೆ ವಿಶೇಷ ಗ್ರಾಮಸಭೆಗೆ ವಿಶ್ವಾಸ ನೀಡಿದ 20 ಮಂದಿ ಗ್ರಾ.ಪಂ ಸದಸ್ಯರೇ ಗೈರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಸಭೆ ಅರ್ಧದಲ್ಲೇ ರದ್ದುಗೊಂಡು, ಇದೇ ತಿಂಗಳ 23 ರಂದು ಇಂಜಿನಿಯರ್ ಉಪಸ್ಥಿತಿಯಲ್ಲಿ ಮತ್ತೊಮ್ಮೆ ವಿಶೇಷ ಗ್ರಾಮಸಭೆ ನಡೆಸುವ ತೀರ್ಮಾನಕ್ಕೆ ಅಭಿವೃದ್ಧಿ ಅಧಿಕಾರಿ ಕೇಶವ ಮುಂದಾದರು. ಅರ್ಧ ಗಂಟೆ ಕಾಲ ನಡೆದ ವಿಶೇಷ ಗ್ರಾಮಸಭೆ ಕೇವಲ ಚಹಾ- ಚಟ್ಟಂಬಡೆಗೆ ಮಾತ್ರ ಸೀಮಿತವಾಯಿತು.

ಸಭೆಯಲ್ಲಿ ಗ್ರಾ.ಒಂ ಅಧ್ಯಕ್ಷೆ ಪುಷ್ಪ ಶೆಟ್ಟಿ, ಉಪಾಧ್ಯಕ್ಷ ಫಯಾಝ್,ಮಾಜಿ ಪಂ ಸದಸ್ಯ ಫಾರುಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *