ಕೃತಕ ಅಡುಗೆ ಅನಿಲ ತುಂಬಿಸುತ್ತಿದ್ದ ಅಡ್ಡೆಗೆ ಉಳ್ಳಾಲ ಪೊಲೀಸರ ದಾಳಿ

ಉಳ್ಳಾಲ : ಕೃತಕವಾಗಿ ಅಡುಗೆ ಅನಿಲ ತುಂಬಿಸುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸ್ ತಂಡ ರೂ.1,92,000 ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ನಿವಾಸಿ ಫ್ರಾನ್ಸಿಸ್ ಎಂಬವರು ತನ್ನ ವಾಸದ ಮನೆಗೆ ತಾಗಿಕೊಂಡು ತಗಡು ಶೀಟಿನಿಂದ ನಿರ್ಮಿಸಿದ ಕೋಣೆಯಲ್ಲಿ ತುಂಬಿದ ಅಡುಗೆ ಅನಿಲ ಸಿಲಿಂಡರಿನಿಂದ ಖಾಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರಿಗೆ ತಾನೇ ಕೃತಕವಾಗಿ ರೆಗ್ಯುಲೇಟರ್ ಮುಖೇನ ತುಂಬಿಸಿ ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆದಿದೆ.ದಾಳಿ ವೇಳೆ ಫ್ರಾನ್ಸಿಸ್ ಕೋಣೆಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ನೆಲದಲ್ಲಿ ಇಟ್ಟು ಅದರ ಮೇಲೆ ತುಂಬಿದ ಗ್ಯಾಸ್ ಸಿಲಿಂಡರನ್ನು ಕವುಚಿ ಹಾಕಿ ಖಾಲಿ ಸಿಲಿಂಡರಿಗೆ ಪೈಪ್ ಮುಖೇನ ಗ್ಯಾಸ್ ಅನ್ನು ಕೃತಕವಾಗಿ ತುಂಬುತ್ತಿದ್ದನು. ಪೊಲೀಸ್ ದಾಳಿ ಗಮನಕ್ಕೆ ಬರುತ್ತಿದ್ದಂತೆ ಸ್ಥಳದಿಂದ ಓಡಿ ತಲೆಮರೆಸಿಕೊಂಡಿದ್ದಾರೆ.
ಸ್ಥಳದಲ್ಲಿ ಹೆಚ್ ಪಿ, ಇಂಡೆನ್, ಭಾರತ್, ಪ್ಯೂರ್, ಟೋಟಲ್ ಕಂಪೆನಿಯ ಸಣ್ಣ ಹಾಗೂ ದೊಡ್ಡ ಮಾದರಿಯ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ಗ್ಯಾಸ್ ತುಂಬಿದ ಸಿಲಿಂಡರ್-15, ತುಂಬಿದ ಆಕ್ಸಿಜನ್ ದೊಡ್ಡ ಸಿಲಿಂಡರ್-1, ಖಾಲಿ ಗ್ಯಾಸ್ ಸಿಲಿಂಡರ್-112 ಒಟ್ಟು ರೂ.1,92,000 ಬೆಲೆಯ 128 ಸಿಲಿಂಡರ್ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸಿಪಿ ಮಂ.ದಕ್ಷಿಣ ವಿಭಾಗ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ , ಎಸ್ .ಐ ಶಿವಕುಮಾರ್ ಕೆ.ಸಿಬ್ಬಂದಿಗಳಾದ ಮಹೇಶ, ರೆಜಿ, ಉದಯ, ಸಾಗರ್ ಹಾಗೂ ಉಳ್ಳಾಲ ವಲಯ ಆಹಾರ ನಿರೀಕ್ಷಕ ಹ್ಯಾರಿಸ್,ಪ್ರಭಾರ ಆಹಾರ ನಿರೀಕ್ಷಕ ರೇಖ ಹಾಗೂ ತಂಡದ ಜೊತೆ ದಾಳಿ ನಡೆಸಿದ್ದರು.