ಕೊಡಗಿನ ಸೊಸೆಯಾಗುತ್ತಿದ್ದಾರೆ ಅದಿತಿ ಪ್ರಭುದೇವ!

ಸೋಮವಾರಪೇಟೆ : ಸ್ಯಾಂಡಲ್ ವುಡ್ ಬೆಡಗಿ ದಾವಣಗೆರೆ ಮೂಲದ ಅದಿತಿ ಪ್ರಭುದೇವ ಕೊಡಗಿನ ಸೊಸೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡೂ ಕುಟುಂಬಗಳು ತಾಂಬೂಲ ಬದಲಾಯಿಸಿಕೊಂಡಿದ್ದು, ವಿವಾಹದ ನಿಶ್ಚಿತಾರ್ಥವಾಗಿದೆ.

ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾ0ತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ವಿಯನ್ನು ಅದಿತಿ ವರಿಸಲಿದ್ದಾರೆ. ಯಶಸ್ವಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕೃಷಿ ಕ್ಷೇತ್ರದ ಕಡೆಗೂ ಒಲವು ಹೊಂದಿದ್ದಾರೆ. ಗ್ರಾಮೀಣ ಭಾಗದ ಸೊಗಡಿನ ಬಗ್ಗೆ ಅತೀವ ಅಭಿಮಾನ ಹೊಂದಿರುವ ಮತ್ತು ಕೃಷಿಕ ಕುಟುಂಬದ ಬಗ್ಗೆ ಆಸಕ್ತಿಯಿದ್ದ ಅದಿತಿ ತಮ್ಮ ನಿರೀಕ್ಷೆಯ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಈಗಾಗಲೇ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ಅದಿತಿ ಹಾಗೂ ಯಶಸ್ವಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಅದಿತಿ ಸೋಮವಾರಪೇಟೆಯ ಸೊಸೆಯಾಗುತ್ತಿರುವ ಬಗ್ಗೆ ಅಲ್ಲಿನ ಸಿನಿ ಅಭಿಮಾನಿಗಳು ಹರ್ಷಗೊಂಡಿದ್ದಾರೆ.
ಮೊದಲಿಗೆ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ಅದಿತಿ ಬಳಿಕ ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದರು. 2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಸದ್ಯ ಅನೇಕ ಸಿನಿಮಾ ಆಫರ್ ಗಳನ್ನು ಕೈಯಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದ ಬ್ಯೂಸಿ ನಟಿಯಾಗಿದ್ದಾರೆ.