ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ : ಹಾಸನದಲ್ಲಿ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಪ್ರಿಯಾಂಕ ಖರ್ಗೆ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರದಂದು ನಗರದ ಹೇಮಾವತಿ ಪ್ರತಿಮೆ ಬಳಿ ಕಾಂಗ್ರೆಸ್ ಮುಖಂಡರು ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ದೇವರಾಜೇ ಗೌಡ ಮಾತನಾಡಿ, ಪ್ರತಾಪ್ ಸಿಂಹ ಅವರ ಅವಹೇಳನಕಾರಿ ಹೇಳಿಕೆ ಖಂಡನೀಯ, ಪ್ರಿಯಾಂಕ ಖರ್ಗೆ ಹೆಸರಿನ ಬಗ್ಗೆ ಮಾತನಾಡುವ ಮುನ್ನ ಪ್ರತಾಪ ಸಿಂಹ ಎಂಬ ಹೆಸರನ್ನು ಇಟ್ಟುಕೊಂಡಿರುವ ಅವರು ಯಾವ ಕಾಡಿನ ಸಿಂಹ ಎಂಬುದು ತಿಳಿಯಬೇಕಿದೆ ಎಂದು ವ್ಯಂಗ್ಯ ವಾಡಿದರು. ಪ್ರತಾಪ್ ಸಿಂಹ, ಸಿ.ಟಿ ರವಿ, ಅನಂತ್ ಕುಮಾರ್ ಹೆಗಡೆ, ಸೇರಿದಂತೆ ಅನೇಕ ಬಿಜೆಪಿಗರು ಈ ಹಿಂದಿನಿಂದಲೂ ಕಾಂಗ್ರೆಸ್ ನಾಯಕರ ಬಗ್ಗೆ, ದಲಿತರ ಬಗ್ಗೆ ನಾಲಿಗೆ ಹರಿಬಿಡುವ ಕೆಟ್ಟ ಸಂಸ್ಕೃತಿ ಹೊಂದಿದ್ದಾರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಪ್ರತಾಪ್ ಸಿಂಹ ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಬನವಾಸೆ ರಂಗಸ್ವಾಮಿ ಮಾತನಾಡಿ, ಈ ಹಿಂದೆ ಸಂಗೀತ ನಿರ್ದೇಶಕ ಹಂಸಲೇಖ ಅವರ ನೈಜ ಹೇಳಿಕೆಯನ್ನು ವಿರೋಧಿಸುವ ಬಿಜೆಪಿ ಮುಖಂಡರು ಇದೀಗ ಪ್ರಿಯಾಂಕ ಖರ್ಗೆ ಬಗ್ಗೆ ಮಾತನಾಡುತ್ತಿದ್ದಾರೆ, ಕಂಡ ಕಂಡಲ್ಲಿ ನಾಲಿಗೆ ಹರಿಬೀಡುವ ಬಿಜೆಪಿ ನಾಯಕರು ವಿನಾಕಾರಣ ಇಲ್ಲದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ಮಾತನಾಡಿ, ಪ್ರಿಯಾಂಕ ಖರ್ಗೆ ಅವರ ಬಗೆಗಿನ ಹೇಳಿಕೆ ದಲಿತರ ಬಗ್ಗೆ ಬಿಜೆಪಿ ಯವರೂ ಹೊಂದಿರುವ ಮನಸ್ಥಿತಿಯನ್ನು ಸೂಚಿಸುತ್ತದೆ, ಸಂಸದ ಪ್ರತಾಪ್ ಸಿಂಹ ಗೌರವಯುತ ಸ್ಥಾನದಲ್ಲಿ ಇದ್ದುಕೊಂಡು ಪ್ರಿಯಾಂಕ ಖರ್ಗೆ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದರು. ಯುವತಿಯರ ಜೊತೆ ಅಸಬ್ಯವಾಗಿ ವರ್ತಿಸುವ, ಹಾಗೂ ಅವಾಚ್ಯ ಶಬ್ದಗಳನ್ನು ಬಳಸುವ ಸಂಸದ ಪ್ರತಾಪ್ ಸಿಂಹನಿಗೆ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ, ಇನ್ನೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡಿದಲ್ಲಿ ಅವರ ನಿವಾಸ ಹಾಗೂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆ ವಾಳು ದೇವಪ್ಪ, ಕೆಲವತ್ತಿ ಸೋಮಶೇಖರ್, ಅಶೋಕ್ ನಾಯಕರ ಹಳ್ಳಿ, ಕುಮಾರ್ ಸ್ವಾಮಿ, ರವಿ ಕುಮಾರ್, ಅಲೀಂ, ದಿವಾಕರ್, ಪಾಪಯ್ಯ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *