ಸ್ಯಾಂಡಲ್ವುಡ್ನ ಅಪ್ಪು, ಕನ್ನಡಿಗರ ಕಣ್ಮಣಿ ಪುನೀತ್ ರಾಜ್ಕುಮಾರ್ ಇನ್ನಿಲ್ಲ!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಪ್ಪು ಎಂದೇ ಖ್ಯಾತರಾಗಿರುವ ಪುನೀತ್ ರಾಜ್ಕುಮಾರ್ ಅವರು ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿರುವುದದಾಗಿ ತಿಳಿದು ಬಂದಿದೆ. ಈ ನಡುವೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದನ್ನು ಅಧಿಕೃತವಾಗಿ ಘೋಷಿಸಿಲ್ಲ.

ಬೆಳಗ್ಗೆ ಜಿಮ್ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾದ ಅವರನ್ನು ಕೂಡಲೇ ಸಮೀಪದ ರಮಣಶ್ರೀ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಎಲ್ಲ ಪ್ರಯತ್ನ ನಡೆಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಕ್ಷಣಕ್ಷಣಕ್ಕೂ ಅವರ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ವೈದ್ಯರೇ ಹೇಳಿದ್ದು, ಇದು ಪರೋಕ್ಷವಾಗಿ ಸಾವಿನ ಸುದ್ದಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಕಳೆದ ಕೆಲವು ಸಮಯದಿಂದ ಕಾಡುತ್ತಿದ್ದ ಆಘಾತದ ಸಾಲಿಗೆ ಪುನೀತ್ ವಿಷಯ ಹೊಸ ಸೇರ್ಪಡೆಯಾಗಿದ್ದು, ಈ ಸುದ್ದಿಯನ್ನು ಅರಗಿಸಿಕೊಳ್ಳಲೇ ಸಾಧ್ಯವಾಗದ ಪರಿಸ್ಥಿತಿ ಎಲ್ಲರಲ್ಲೂ ಮೂಡಿದೆ. ಅವರು ದಾಖಲಾಗಿರುವ ವಿಕ್ರಂ ಆಸ್ಪತ್ರೆಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸುವುದೇ ಕಷ್ಟವಾಗಿದೆ.
ಕನ್ನಡಿಗರ ಕಣ್ಮಣಿ, ಬಡವರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ ಅವರು ನಿರ್ಮಾಪಕರಾಗಿಯೂ ಸುದ್ದಿ ಮಾಡಿದ್ದರು. ಬಡವರು ಹಾಗೂ ಬಡ ಕಲಾವಿದರ ಪಾಲಿಗೆ ಆಪದ್ಬಾಂಧವರಾಗಿದ್ದ ಅವರ ಅಸ್ವಸ್ಥತೆಯ ಸುದ್ದಿ ಇಡೀ ಸ್ಯಾಂಡಲ್ವುಡ್ಗೆ ಸಿಡಿಲು ಬಡಿದಂತಾಗಿದೆ.
1975ರಲ್ಲಿ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಾಲನಟನಾಗಿ ಕಾಣಿಸಿಕೊಂಡಿದ್ದ ಅವರು ಮುಂದೆ 1983ರಲ್ಲಿ ಭಕ್ತ ಪ್ರಹ್ಲಾದ ಸಿನೆಮಾದಲ್ಲಿ ಅದ್ಭುತವಾಗಿ ನಟಿಸಿ ಗಮನ ಸೆಳೆದು ಪ್ರಶಸ್ತಿಗೂ ಭಾಜನರಾಗಿದ್ದರು.
ಬಾಲನಟವಾಗಿ ಚಿತ್ರರಂಗ ಪ್ರವೇಶಿಸಿದ್ದ ಇವರು ರಾಜ್ ಕುಮಾರ್ ಅವರ ಪ್ರೀತಿಯ ಅಪ್ಪುವಾಗಿದ್ದರು. ಬಳಿಕ ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕಕ್ಕೂ ಅಪ್ಪು ಆಗಿಯೇ ಕನ್ನಡಿಗರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.¬
ಹಲವಾರು ಸಿನಿಮಾ ಕಲಾವಿದರನ್ನು ಬೆಳೆಸಿರುವ ಇವರು ಯಾವುದೇ ಅಹಂ ಇಲ್ಲದೆ ಹೊಸಬರೊಂದಿಗೂ ಬೆರೆಯುತ್ತಿದ್ದರು. ಹೊಸಬರಿಗೆ ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಶೂಟಿಂಗ್ ಸ್ಥಳ್ಕಕೂ ಬಂದು ಹುರಿದುಂಬಿಸುತ್ತಿದ್ದರು. ಇವರು ನಿರ್ಮಾಣ ಕಾರ್ಯದಲ್ಲಿ ತೊಡಿಗಿಸಿಕೊಂಡಿರುವ ಕೊನೆಯ ಸಿನಿಮಾ ಸತ್ಯಪ್ರಕಾಶ್ ನಿರ್ದೇಶನದ ಮ್ಯಾನ್ ಆಫ್ ದ ಮ್ಯಾಚ್ ಆಗಿತ್ತು. ಈ ಸಿನೆಮಾ ಮುಂದಿನ ತಿಂಗಳು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿತ್ತು.
ಚಿತ್ರೋದ್ಯಮವೇ ಕಂಗಾಲು
ಪುನೀತ್ ಈಗಾಗಲೇ ಕೆಲವು ಸಿನಿಮಾದಲ್ಲಿ ನಟಿಸುತ್ತಿದ್ದು, ಅದು ಅರ್ಧದಲ್ಲೇ ಉಳಿದಿದೆ. ಇವರು ನಿರ್ಮಾಣ ಮಾಡುತ್ತಿರುವ ಕೆಲವು ಸಿನಿಮಾಗಳು ಹಾಗೂ ನಡೆಸಿಕೊಡುವ ರಿಯಾಲಿಟಿಶೋಗಳೂ ಇವೆ. ಇವೆಲ್ಲ ಪುನೀತ್ ಇಲ್ಲದೆ ಅನಾಥವಾಗುವ ಸ್ಥಿತಿ ನಿರ್ಮಾಣವಾಗಲಿದೆ. ಜತೆಗೆ ಇಡೀ ಚಿತ್ರರಂಗದ ಮುಂದೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಕೋಸ್ಟಲ್ವುಡ್ ಜತೆಗೂ ಸಂಪರ್ಕ
ಪುನೀತ್ ಅವರು ತುಳು ಚಿತ್ರವೊಂದನ್ನು ಹಾಡಿದ್ದರಲ್ಲದೆ, ತುಳು ಸಿನಿಮಾ ರಂಗದೊಂದಿದೆ ಉತ್ತಮ ಸಂಬಂಧ ಇರಿಸಿಕೊಂಡಿದ್ದರು. ಅವರ ಪಿಆರ್ಕೆ ಆಡಿಯೋ ಮೂಲಕವೂ ಕೋಸ್ಟಲ್ವುಡ್ನಲ್ಲಿ ಪಾಲು ಪಡೆದುಕೊಂಡಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಲಾವಿದರ ಸಮಸ್ಯೆಗೆ ಸ್ಪಂದನೆ
ಪುನೀತ್ ಅವರು ಕೊರೊನಾ ಸಂದರ್ಭ ಸಹಿತ ಎಲ್ಲ ಕಾಲದಲ್ಲೂ ಬಡ ಕಲಾವಿದರ ಜತೆಗಿದ್ದರು. ಅವರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು.
ಕಣ್ಣೀರಾಗುತ್ತಿರುವ ಕರುನಾಡು
ಪುನೀತ್ ಆರೋಗ್ಯ ಕುಸಿದ ಕಾರಣದಿಂದ ಇಡೀ ಕರುನಾಡು ಕಣ್ಣೀರಾಗಿದೆ. ತಮ್ಮ ಆಪ್ತ ನಟನನ್ನು ಕಾಣಲು ಆಸ್ಪತ್ರೆಗೆ ಧಾವಿಸಿ ಬಂದವರ ಸಂಖ್ಯೆ ಅಪಾರ. ರಾಜ್ಯಾದ್ಯಂತ ಶುಕ್ರವಾರ ಅಪರಾಹ್ನ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಅಭಿಮಾನಿಗಳು ಕೆಲಸಕ್ಕೆ ರಜೆ ಪಡೆದು ಆಸ್ಪತ್ರೆ ಹಾಗೂ ಪುನೀತ್ ಮನೆಯ ಕಡೆಗೆ ಹೊರಡಿದ್ದಾರೆ. ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.