ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾಗದ ಹಿಂದೂಗಳ ಮನೆಗಳಲ್ಲಿ ಕ್ರೈಸ್ತ ಧರ್ಮ ಪ್ರಚಾರದ ಪುಸ್ತಕಗಳು ಪತ್ತೆ

ಉಳ್ಳಾಲ: ರೈಲ್ವೇ ನಿಲ್ದಾಣದ ಹಿಂದುಗಡೆಯ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಇಂದು ನಡೆದಿದ್ದು, ಘಟನೆ ಸಂಬಂಧ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಬೆಳಿಗ್ಗೆ ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15 ರಷ್ಟು ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ವಿಚಾರಗಳ ಕುರಿತ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಮನೆಗಳ ಗೇಟಿನಲ್ಲಿ ಇರಿಸಿದ್ದಾನೆ. ಈ ಸಂದರ್ಭ ವೃದ್ಧೆಯೊಬ್ಬರು ವ್ಯಕ್ತಿಯನ್ನು ಗಮನಿಸಿ ಸೇಲ್ಸ್ ಮೆನ್ ಅಂದುಕೊಂಡು ತಮಗೇ ಯಾವುದೇ ಸೊತ್ತುಗಳು ಬೇಡ ಅಂದಿದ್ದಾರೆ. ಆದರೂ ಆತ ಅವರ ಗೇಟಿನಲ್ಲಿ ಪುಸ್ತಕ, ಭಿತ್ತಿಪತ್ರ , ಸ್ಟಿಕ್ಕರ್ ಇರಿಸಿ ಪರಾರಿಯಾಗಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಮತಾಂತರ ನಡೆಸುವ ಉದ್ದೇಶದಿಂದಲೇ ಕೃತ್ಯ ಎಸಗಲಾಗಿದೆ ಅನ್ನುವ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಉಳ್ಳಾಲದ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *