*‘ಮ್ಯಾನ್ ಅಫ್ ದಿ ಮ್ಯಾಚ್ ‘ ಜೊತೆಗೆ ಬಂದ ಸತ್ಯಪ್ರಕಾಶ್*

ಕನ್ನಡ ಚಿತ್ರರಂಗದ ಭರವಸೆಯ, ಪ್ರತಿಭಾವಂತ ನಿರ್ದೇಶಕ ಇಷ್ಟು ದಿನಗಳ ಕಾಲ ನಿಗೂಢವಾಗಿ ಯಾಕೆ ಕಾಣೆಯಾಗಿದ್ದಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಹೌದು, ಕೇವಲ ಎರಡೇ ಎರಡು ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸಿನಿಮಾ ಅನ್ನೋದು ನಿರ್ದೇಶಕನ ಮಾಧ್ಯಮ ಎಂದು ತೋರಿಸಿಕೊಟ್ಟಿದ್ದ ಸತ್ಯಪ್ರಕಾಶ್ ಮತ್ತೆ ಸಿನಿಮಾ ನಿರ್ದೇಶಿಸಲಿ ಎನ್ನುವ ನಿರೀಕ್ಷೆ ಹಲವರಲ್ಲಿತ್ತು. ಒಂದು ಸುದೀರ್ಘ ಗ್ಯಾಪ್ ಬಳಿಕ ಸತ್ಯಪ್ರಕಾಶ್ ಹೊಸ ಸಿನಿಮಾ ಘೋಷಿಸಿದ್ದಾರೆ.ಇಷ್ಟೊಂದು ದಿನಗಳ ಕಾಲ ಸತ್ಯಪ್ರಕಾಶ್ ಎಲ್ಲಿ ಮಾಯವಾಗಿದ್ದರು ಎನ್ನುವುದಕ್ಕೂ ಉತ್ತರ ಸಿಕ್ಕಿದೆ. ಸದ್ಯಕ್ಕೆ ಸತ್ಯಪ್ರಕಾಶ್ ಬತ್ತಳಿಕೆಯಲ್ಲಿ ‘ಮ್ಯಾನ್ ಅಫ್ ದಿ ಮ್ಯಾಚ್ ಸಿನಿಮಾ ಇದೆ. ಹೆಸರಿನಲ್ಲೇ ಕುತೂಹಲ ಹುಟ್ಟಿಸಿರುವ ನಿರ್ದೇಶಕ ಕಥೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಟೈಟಲ್ ಕ್ರಿಕೆಟಿಗೆ ಸಂಬಂಧಿಸಿದ್ದಾದರೂ ಕಥೆ ಕ್ರಿಕೆಟ್ ಬಿಟ್ಟೂ ಆಚೆಗೂ ಬೇರೇನೋ ಇದೆ ಎಂಬ ಇಶಾರೆ ಕೊಡುತ್ತಿದೆ.ಕನ್ನಡ ಚಿತ್ರರಂಗಕ್ಕೆ ’ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ ದಂತಹ ಅಪರೂಪದ ಸಿನಿಮಾಗಳನ್ನು ನೀಡಿದ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯಪ್ರಕಾಶ್ ಅವರು ತಮ್ಮ ಸಿನಿ ಪಯಣದ ಸ್ನೇಹಿತರ ಜೊತೆಗೂಡಿ ’ಸತ್ಯ ಪಿಕ್ಚರ್ಸ್’ ಎನ್ನುವ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯ ವತಿಯಿಂದ ಈಗಾಗಲೇ ಚಿತ್ರ ನಿರ್ಮಾಣದ ಕೆಲಸಗಳು ಪ್ರಾರಂಭಗೊಂಡಿದ್ದು, ಇವರ ಜೊತೆಗೆ ’ಉದ್ಘರ್ಷ’ (ಸಹನಿರ್ಮಾಣ) ಮತ್ತು ’ವೀಕೆಂಡ್’ ಎಂಬ ಸಿನಿಮಾ ನಿರ್ಮಾಣ ಮಾಡಿದ ’ಮಯೂರ ಮೋಷನ್ ಪಿಕ್ಚರ್ಸ್’ ನ ನಿರ್ಮಾಪಕರಾದ ಮಂಜುನಾಥ ದಾಸೇಗೌಡ ಅವರು ಕೈ ಜೋಡಿಸುತ್ತಿದ್ದಾರೆ. ಈ ತಂಡ “ಸತ್ಯ & ಮಯೂರ ಪಿಕ್ಚರ್ಸ್” ಲಾಂಛನದ ಅಡಿಯಲ್ಲಿ ನಿರಂತರವಾಗಿ ವಿವಿಧ ವಸ್ತು ವಿಷಯಗಳನ್ನು ಒಳಗೊಂಡಿರುವ ಚಲನಚಿತ್ರ ಹಾಗೂ ಓಟಿಟಿಗೆ ಬೇಕಾದ ಕಥೆಗಳನ್ನು ಪ್ರೇಕ್ಷಕರ ಮುಂದಿಡುವ ಉದ್ದೇಶ ಹೊಂದಿದ್ದಾರೆ.ಇವರ ಪಾಲುದಾರಿಕೆಯಲ್ಲಿ (ಸತ್ಯ & ಮಯೂರ ಪಿಕ್ಚರ್ಸ್) ಮೊದಲ ಚಿತ್ರವನ್ನು ಡಿ ಸತ್ಯಪ್ರಕಾಶ್ ಅವರೇ ನಿರ್ದೇಶಿಸಲಿದ್ದಾರೆ. ರಾಮಾ ರಾಮಾ ರೇ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರೆಯಲಿದೆ. ಕಥೆ, ಚಿತ್ರಕಥೆ ಮುಗಿಸಿ ಶೂಟಿಂಗಿಗೆ ಸಿದ್ದವಾಗಿರುವ ಈ ಸಿನಿಮಾದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

Leave a Reply

Your email address will not be published. Required fields are marked *