ಬಲ್ಮಠ ಖಝಾನ ಜ್ಯುವೆಲ್ಲರ್‌ಗೆ ಬೀಗ?

ಮಂಗಳೂರು: ನಗರದಲ್ಲಿ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯಾಗಿದ್ದ ಬಲ್ಮಠದ ಖಝಾನ ಜ್ಯುವೆಲ್ಲರ್‌ಗೆ ಬೀಗ ಜಡಿಯಲು ಮಾಲಕರು ಮುಂದಾಗಿದ್ದು, ಇದರಿಂದ ಸ್ಕೀಂಗೆ ಸೇರಿದ್ದ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ.
ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಖಝಾನ ಜ್ಯುವೆಲ್ಲರ್ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇಲ್ಲಿ ವಿವಿಧ ಮೊತ್ತದ ಚಿನ್ನಾಭರಣ ನೀಡುವ ಮಾಸಿಕ ಸ್ಕೀಂ ನಡೆಸಲಾಗುತ್ತಿತ್ತು. ವಿಶ್ವಾಸಾರ್ಹ ಜ್ಯುವೆಲ್ಲರ್ ಆಗಿದ್ದರಿಂದ ಮದುವೆ ಹಾಗೂ ಇತರ ಸಂದರ್ಭದಲ್ಲಿ ಅಗತ್ಯಕ್ಕೆ ಬೇಕಾಗುತ್ತದೆ ಎನ್ನುವ ನೆಲೆಯಲ್ಲಿ ಬಡವರ ಸಹಿತ ಸಾವಿರಾರು ಗ್ರಾಹಕರು ಸೇರ್ಪಡೆಗೊಂಡಿದ್ದರು. ಆದರೆ ಈಗ ಸ್ಕೀಂಗೆ ಸೇರಿದ್ದ ಗ್ರಾಹಕರಿಗೆ ನೋಟಿಸ್ ಜಾರಿಗೊಳಿಸಿದ್ದು, ಏಪ್ರಿಲ್ 19ರ ಬಳಿಕ ಮಂಗಳೂರಿನಲ್ಲಿರುವ ಸಂಸ್ಥೆ ಬಂದ್ ಆಗಲಿದ್ದು, ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ. ಅದಕ್ಕಿಂತ ಮೊದಲು ಕಟ್ಟಿದ ಹಣ ಪಡೆಯುವಂತೆ ಸೂಚಿಸಲಾಗಿದೆ.
ಇದರಿಂದ ಆತಂಕಗೊಂಡಿರುವ ನೂರಾರು ಗ್ರಾಹಕರು ಜ್ಯುವೆಲ್ಲರ್‌ಗೆ ಧಾವಿಸಿದ್ದು, ಸ್ಕೀಂಗೆ ಸೇರುವ ಸಂದರ್ಭದಲ್ಲಿ ನೀಡಲಾಗಿದ್ದ ಕರಾರು ಪತ್ರವನ್ನು ಪಡೆಯುತ್ತಿದ್ದು, ಬೆಂಗಳೂರಿಗೆ ವರ್ಗಾವಣೆಗೊಂಡ ಬಳಿಕ ಬ್ಯಾಂಕ್ ಖಾತೆಗೆ ಕಟ್ಟಿದ ಹಣ ಜಮಾಯಿಸುವ ಆಶ್ವಾಸನೆ ನೀಡಲಾಗುತ್ತಿದೆ. ಆದರೆ ಇದಕ್ಕೆ ಒಪ್ಪದ ಗ್ರಾಹಕರು ಕಟ್ಟಿದ ಹಣಕ್ಕೆ ಚಿನ್ನಾಣಭರಣ ಕೇಳಿದರೆ ಅದಕ್ಕೂ ಮೇಕಿಂಗ್ ಮತ್ತು ವೇಸ್ಟೇಜ್ ನೆಪದಲ್ಲಿ ಶೇ20ರಷ್ಟು ಹೆಚ್ಚುವರಿ ಹಣವನ್ನು ಹಾಕಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅಲ್ಲದೆ ಸ್ಕೀಂಗೆ ಸೇರುವ ಸಂದರ್ಭ ಗ್ರಾಹಕರಿಗೆ ಗಿಪ್ಟ್ ರೂಪದಲ್ಲಿ ವಿವಿಧ ವಸ್ತುಗಳನ್ನು ನೀಡಿತ್ತು. ಈಗ ಹಣ ಹಿಂದಕ್ಕೆ ಪಡೆಯಲು ಬಂದವರಿಂದ ಗಿಫ್ಟ್ ನೀಡಿರುವ ವಸ್ತುಗಳ ಬೆಲೆಯನ್ನೂ ನಿಗದಿಪಡಿಸಿ ವಸೂಲಿ ಮಾಡಿ ವಂಚಿಸುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಕಳೆದ ಹಲವು ತಿಂಗಳಿಂದ ಪ್ರಾಮಾಣಿಕವಾಗಿ ಕಂತುಗಳನ್ನು ಕಟ್ಟುತ್ತಾ ಬಂದಿದ್ದೇವೆ. ಆದರೆ ಈಗ ಆರಂಭದಲ್ಲಿ ನೀಡಿದ್ದ ಗಿಫ್ಟ್‌ನ ಹಣ ವಸೂಲಿ ಮಾಡುವುದು, ಕಟ್ಟಿದ ಹಣಕ್ಕೆ ಆಭರಣ ಕೇಳಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಅದೇ ರೀತಿ ನಾವು ಕಟ್ಟಿದ ಹಣಕ್ಕೆ ಸಂಸ್ಥೆ ಬಡ್ಡಿ ನೀಡಲಿ. ಅದೂ ಅಲ್ಲದೆ ಏಪ್ರಿಲ್19 ರ ಬಳಿಕ ಖಾತೆಗೆ ಹಣ ಹಾಕುವುದಾಗಿ ಸಂಸ್ಥೆ ಹೇಳುತ್ತಿದ್ದು, ಇದನ್ನು ನಂಬುವುದಾದರೂ ಹೇಗೆಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *