ತಲಪಾಡಿ ಮರಳು ಟಿಪ್ಪರ್ ಪಲ್ಟಿ: ಪಾದಚಾರಿ ಮಹಿಳೆ ಪವಾಡಸದೃಶ ಪಾರು

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯನ್ನು ತಪ್ಪಿಸಿ ಕಳ್ಳ ದಾರಿಯಾಗಿ ಒಳರಸ್ತೆ ಮೂಲಕ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಗುದ್ದಿದ ಪರಿಣಾಮ ಮರ ಉರುಳಿ ಬಿದ್ದು ಟಿಪ್ಪರ್ ಪಲ್ಟಿಯಾಗಿರುವ ಘಟನೆ ಇಂದು ಮದ್ಯಾಹ್ನ ವೇಳೆ ಸಂಭವಿಸಿದೆ. ಟಿಪ್ಪರ್ ದೇವಿಪುರ ದೇವಸ್ಥಾನಕ್ಕೆ ಢಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ತಪ್ಪಿದ್ದು ದೇವಸ್ಥಾನದಿಂದ ಹೊರಬರುತ್ತಿದ್ದ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ.  ಕೇರಳ ಕಡೆಯತ್ತ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಸಂದರ್ಭ ಘಟನೆ ನಡೆದಿದೆ ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಕೋವಿಡ್ ಚೆಕ್ ಪಾಯಿಂಟ್ ಆರಂಭಗೊಂಡಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದನ್ನು ತಪ್ಪಿಸಿ ಚಾಲಕ ಒಳರಸ್ತೆಯ ಮುಖೇನ ಮರಳು ಸಾಗಾಟ ನಡೆಸುತ್ತಿದ್ದ ಅನ್ನುವ ಆರೋಪ ಕೇಳಿಬಂದಿದೆ. ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಪುರ ರಸ್ತೆಯಾಗಿ ತೆರಳುವ ಮರಳು ಲಾರಿಗಳು ಇದೀಗ ಹಗಲು ಹೊತ್ತಿನಲ್ಲಿಯೂ ಸಂಚರಿಸಲು ಆರಂಭವಾಗಿದೆ. ಸ್ಥಳೀಯರು ಮರಳು ಮಾಫಿಯಾ ವಿರುದ್ಧ ದೂರು ನೀಡಲು ಹೆದರುತ್ತಿದ್ದು, ಇದರಿಂದ ಮರಳು ಮಾಫಿಯಾದವರ ಅಟ್ಟಹಾಸವನ್ನು ಕೇಳುವವರಿಲ್ಲವಾಗಿದೆ. ಅಪಘಾತದ ಕುರಿತು ನಾಗುರಿ ಸಂಚಾರಿ ಠಾಣೆಗೆ ಸ್ಥಳೀಯರು ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *