ಕಿನ್ನಿಗೋಳಿ: ನೂರಾರು ಬೈಕ್‌ಗಳನ್ನಿಟ್ಟು ಪ್ರತಿಭಟಿಸಿ ಕಟ್ಟಡ ಮಾಲೀಕನ ಬೆವರಿಳಿಸಿದ ಸಾರ್ವಜನಿಕರು

ಮೂಲ್ಕಿ: ಕಿನ್ನಿಗೋಳಿಯ ಅನುಗ್ರಹ ಕಟ್ಟಡದ ಮುಂದೆ ನಿನ್ನೆ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಹಲ್ಲೆ ಮಾಡಿದ ಕಟ್ಟಡ ಮಾಲೀಕರಾಗಿರುವ ಮೂರು ಮಂದಿ ಸಹೋದರರ ವಿರುದ್ಧ ಇಂದು ಬೆಳಿಗ್ಗೆ ಸಾರ್ವಜನಿಕರು ಆಕ್ರೋಶಗೊಂಡು ನೂರಾರು ಬೈಕ್‌ಗಳನ್ನು ಇಟ್ಟು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಬುಧವಾರ ನರೇಂದ್ರ ಅವರು ತಮ್ಮ ಬೈಕ್‌ನ್ನು ಇಟ್ಟು ತೆರಳಿದ್ದು, ಹಿಂದೆ ಬಂದಾಗ ಕಟ್ಟಡ ಮಾಲೀಕರು ಮೂವರು ಸಹೋದರರು ಬೆತ್ತದಲ್ಲಿ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಪ್ರೆತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ ಅವರು ಮಾತನಾಡಿ, ಈ ಘಟನೆಯಿಂದ ಭಾರೀ ಸಂಖ್ಯೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಟ್ಟಡ ಮಾಲೀಕರ ವರ್ತನೆಗೆ ತಕ್ಕೆ ಉತ್ತರ ಕೊಡಲು ನಮಗೂ ಗೊತ್ತಿದೆ, ಆದರೆ ಅವರಂತೆ ನಾವಲ್ಲ, ಇಂತಹ ಘಟನೆ ಮರುಕಳಿಸಿದರೇ ಅವರಿಗಿಂತಲೂ ಹೆಚ್ಚೇ ಆಕ್ರೋಶವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ನಮಗೂ ತಿಳಿದಿದೆ ಎಂದರು.
ಈ ನಡುವೆ ಶಾಸಕ ಉಮಾನಾಥ ಕೋಟ್ಯಾನ್‌ರಲ್ಲಿ ದೂರವಾಣಿಯ ಮೂಲಕ ಮನವಿ ಮಾಡಿಕೊಂಡಿದ್ದರಿಂದ ಅವರ ಸೂಚನೆಯಂತೆ ಎರಡು ದಿನದಲ್ಲಿ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದೇನೆ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ ಎಂದು ಪ್ರತಿಭಟನೆಯನ್ನು ಎರಡು ದಿನದ ನಂತರ ಮತ್ತೆ ನಡೆಸುವ ತೀರ್ಮಾನ ಕೈಗೊಂಡರು. ಕುಶಲ ಪೂಜಾರಿ, ಲೋಕಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮೂಲ್ಕಿ ಪೊಲೀಸರು ಬಂದೋಬಸ್ತನ್ನು ನೀಡಿದ್ದರು.

Leave a Reply

Your email address will not be published. Required fields are marked *