ಸುರೇಂದ್ರ ಬಂಟ್ವಾಳ ಹತ್ಯೆ: ಪ್ರಮುಖ ಆರೋಪಿ ವೆಂಕಪ್ಪ ಪ್ರಕರಣದಿಂದ ಹೊರಬರಲು ಪ್ರಯತ್ನ!

ಮಂಗಳೂರು: ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮಾಲಕ ಹಾಗೂ ದೀರ್ಘಕಾಲದಿಂದ ಅವರ ಜತೆಯಲ್ಲಿಯೇ ಇದ್ದ ವೆಂಕಪ್ಪ ಯಾನೆ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಪ್ರಭಾವ ಬೀರಿ ಪ್ರಕರಣದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾನೆ ಹಾಗೂ ತಕ್ಷಣ ಜಾಮೀನಿಗೂ ಪ್ರಯತ್ನಿಸುತ್ತಿದ್ದಾನೆ ಎಂದು ಬಂಟ್ವಾಳದಲ್ಲಿ ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸುರೇಂದ್ರ ಮತ್ತು ವೆಂಕಟೇಶ್ ನಡುವೆ ವ್ಯಾವಹಾರಿಕ ಸಂಬಂಧವೂ ಇತ್ತೆನ್ನಲಾಗಿದೆ. ಈ ನಡುವೆ ವೆಂಕಟೇಶ್‌ನನ್ನು ಪ್ರಮುಖ ಆರೋಪಿಯಾಗಿಸಲೂ ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಆರೋಪಿ ವೆಂಕಟೇಶ್ ಈಗ ಪ್ರಭಾವ ಬಳಸಿ ಪ್ರಕರಣದಿಂದ ತನ್ನ ಹೆಸರನ್ನು ಕೈಬಿಡುವಂತೆ ಮಾಡಲು ಭಾರೀ ಶ್ರಮಿಸುತ್ತಿದ್ದು, ಆದರೆ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಎಸ್‌ಪಿ ಲಕ್ಷ್ಮೀಪ್ರಸಾದ್ ಅವರು ಯಾವುದೇ ಪ್ರಭಾವಕ್ಕೂ ಮಣಿಯುತ್ತಿಲ್ಲ. ಪ್ರಕರಣಧ ತನಿಖಾಧಿಕಾರಿಯೂ ಈ ವಿಷಯದಲ್ಲಿ ಖಡಕ್ ಆಗಿದ್ದು, ಇದು ವೆಂಕಟೇಶ್‌ಗೆ ಕಾನೂನು ಉರುಳು ಬಿಗಿಯಾಗುವಂತೆ ಮಾಡುತ್ತಿದೆ.
ಹಣ ಕೊಟ್ಟಿದ್ದರೂ ಫ್ಲ್ಯಾಟನ್ನು ಸುರೇಂದ್ರ ಹೆಸರಿಗೂ ವೆಂಕಟೇಶ್ ಮಾಡಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ ದೀರ್ಘಕಾಲದಿಂದ ಸುರೇಂದ್ರನ ಜತೆಗೇ ಆತ್ಮೀಯವಾಗಿದ್ದು, ಈಗ ವಿಶ್ವಾಸವಂಚನೆ ಮಾಡಿ ಮಿತ್ರನಂತಿದ್ದ ಸುರೇಂದ್ರನ ಪ್ರಾಣಕ್ಕೇ ಕುತ್ತು ತಂದಿದ್ದಾನೆ. ಇವನನ್ನು ಯಾವುದೇ ಕಾರಣಕ್ಕೂ ಪ್ರಕರಣದಿಂದ ಕೈ ಬಿಡಬಾರದೆಂದು ಬಂಟ್ವಾಳದ ನಾಗರಿಕರು ಪೊಲೀಸರಲ್ಲಿ ವಿನಂತಿಸಿದ್ದಾರೆ.
