ಬಿಸಿರೋಡ್: ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ!

ಮಂಗಳೂರು: ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಸುರೇಂದ್ರ ಬಂಟ್ವಾಳ್ ಬಿಸಿರೋಡ್ ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ವಾಸವಿದ್ದು ಇಂದು ಮಧ್ಯಾಹ್ನ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸುರೇಂದ್ರ ಬಂಟ್ವಾಳ್ ಜೊತೆಗಿದ್ದವರೇ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಹಿಂದೆ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಸುರೇಂದ್ರ ಬಂಟ್ವಾಳ್ ಬಿಸಿರೋಡ್, ಬಂಟ್ವಾಳ ಪರಿಸರದಲ್ಲಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದರು. ಭೂಗತ ಜಗತ್ತಿನ ಜೊತೆ ಹೆಸರು ಕೇಳಿಬಂದಿತ್ತಾದರೂ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಸುರೇಂದ್ರರನ್ನು ಯಾರು ಯಾವ ಕಾರಣಕ್ಕೆ ಹತ್ಯೆಗೈದರು ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.