ಸೆಮೀಸ್‌ನಲ್ಲಿ ಜಮೈಕಾಗೆ ಆಘಾತ: ಸಿಪಿಎಲ್‌ ಫೈನಲ್‌ಗೇರಿದ ಟ್ರಿನ್‌ಬಾಗೊ

ತರೌಬಾ: ಅಖೀಲ್‌ ಹುಸೇನ್‌ ಹಾಗೂ ಖಾರಿ ಪೀರೆ ನಡೆಸಿದ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಇಲ್ಲಿ ಜಮೈಕಾ ತಲ್ಲವಾಹ್ಸ್‌ ವಿರುದ್ಧ ನಡೆದ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್)ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್‌ರೈಡರ್ಸ್‌ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿದೆ. ಟೂರ್ನಿಯುದ್ದಕ್ಕೂ ಒಂದು ಸೋಲು ಕಾಣದೆ ಮುನ್ನುಗ್ಗುತ್ತಿರುವ ಟ್ರಿನ್‌ಬಾಗೋ ಸೆಮೀಸ್‌ ಗೆಲುವಿನ ಮೂಲಕ ಈ ಬಾರಿಯ ಸಿಪಿಎಲ್‌ ಟೂರ್ನಿಯ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಅತ್ತ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗಯಾನ ಅಮೆಜಾನ್‌ ವಾರಿಯರ್ಸ್‌ ವಿರುದ್ಧ ೧೦ ವಿಕೆಟ್‌ಗಳ ಜಯ ಸಾಧಿಸಿದ ಸೈಂಟ್‌ ಲೂಸಿಯಾ ಝೌಕ್ಸ್‌ ಕೂಡ ಫೈನಲ್‌ಗೆ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಜಮೈಕಾ ತಲ್ಲವಾಹ್ಸ್‌ ದಾಂಡಿಗರು ತೀರಾ ನಿರಾಶಾದಾಯಕ ನಿರ್ವಹಣೆ ತೋರಿದರು. ಅಲ್ಲದೆ ಎದುರಾಳಿ ತಂಡದ ಹುಸೇನ್‌ ಹಾಗೂ ಪೀರೆ ಬೌಲಿಂಗ್‌ ದಾಳಿಗೆ ಸೂಕ್ತ ಉತ್ತರ ನೀಡುವಲ್ಲಿ ತಂಡ ವಿಫಲತೆ ಕಂಡಿತು. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ ೧೦೭ ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಜಮೈಕಾ ಪರ ಎನ್‌ಕ್ರುಮಾ ಬೋನ್ನರ್‌ (೪೧) ಹಾಗೂ ರೋವ್ಮನ್‌ ಪಾವೆಲ್‌ (೩೩) ಕೆಲಹೊತ್ತು ತಂಡಕ್ಕೆ ಆಸರೆಯಾಗಿದ್ದರು. ಟ್ರಿನ್‌ಬಾಗೊ ಪರ ಹುಸೇನ್‌ ಮೂರು ಹಾಗೂ ಪೀರೆ ಎರಡು ವಿಕೆಟ್‌ ಪಡೆದರು.
ಗುರಿ ಬೆನ್ನತ್ತಿದ ಟ್ರಿನ್‌ಬಾಗೊ ೧೪ ರನ್‌ ಗಳಿಸುವ ವೇಳೆ ಸುನೀಲ್‌ ನಾರೈನ್‌ (೪) ವಿಕೆಟ್‌ ಕಳಕೊಂಡಿತ್ತು. ಆದರೆ ದ್ವಿತೀಯ ವಿಕೆಟ್‌ಗೆ ಲೆಂಡಿಲ್‌ ಸಿಮೊನ್ಸ್‌ (೫೪) ಹಾಗೂ ಟಿಯೊನ್‌ ವೆಬ್‌ಸ್ಟರ್‌ (೪೪) ಜೋಡಿ ಅಜೇಯ ೯೭ ರನ್‌ಗಳ ಜೊತೆಯಾಟ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿತು. ಸಿಮೊನ್ಸ್‌ ತನ್ನ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಿಡಿಸಿದ್ದರು. ಅಂತಿಮವಾಗಿ ತಂಡ ೧೫ ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ ೧೧೧ ರನ್‌ ಗಳಿಸಿ, ಜಯ ಸಾಧಿಸಿತು. ಜಮೈಕಾ ಪರ ಮುಜೀಬ್‌ ಉರ್‌ ರೆಹ್ಮಾನ್‌ ಒಂದು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *