ಸಿಎಸ್‌ಕೆ ತಂಡಕ್ಕೆ ಮತ್ತೊಂದು ಶಾಕ್‌ ಐಪಿಎಲ್‌ನಿಂದ ಹೊರಗುಳಿದ ಭಜ್ಜಿ!

ದುಬೈ: ಸಿಎಸ್‌ಕೆ ತಂಡಕ್ಕೆ ಕೊರೊನಾ ವೈರಸ್ ಶಾಕ್ ನೀಡಿದ ಬೆನ್ನಿಗೆ ಆಘಾತ ನೀಡಿದ್ದು ತಂಡದ ಉಪನಾಯಕ ಸುರೇಶ್ ರೈನಾ ಅವರ ಹಠಾತ್ ನಿರ್ಗಮನ. ಸುರೇಶ್ ರೈನಾ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಐಪಿಎಲ್ ತೊರೆದು ಭಾರತದಕ್ಕೆ ವಾಪಾಸ್ಸಾದರು. ಇದೀಗ ಹರ್ಭಜನ್‌ ಸಿಂಗ್‌ ಕೂಡ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಹಲವು ಗೊಂದಲಗಳ ನಡುವೆ ಕೊನೆಗೂ ಸಿಎಸ್‌ಕೆ ತಂಡ ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಸೆಪ್ಟೆಂಬರ್ 3ರಂದು ನಡೆದ ಕೊರೊನಾ ಪರೀಕ್ಷೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣ ಸಿಎಸ್‌ಕೆ ಪಾಳಯಕ್ಕೆ ಅಭ್ಯಾಸ ನಡೆಸಲು ಅವಕಾಶ ಸಿಕ್ಕಿದ್ದು ನಿರಾಳತೆ ತರಿಸಿದೆ. ಆದರೆ ಈ ಸಿಹಿ ಸುದ್ದಿಯ ಬೆನ್ನಿಗೆ ಅನುಭವಿ ಕ್ರಿಕೆಟಿಗ ಭಜ್ಜಿ ಟೂರ್ನಿಗೆ ಅಲಭ್ಯರಾಗಿರುವುದು ತಂಡಕ್ಕೆ ಸಹಜವಾಗಿಯೇ ಆಘಾತ ತಂದಿದೆ. ವೈಯಕ್ತಿಕ ಕಾರಣಗಳಿಂದಾಗಿ ಹರ್ಭಜನ್ ಸಿಂಗ್ ತಡವಾಗಿ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಲು ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ ಈಗ ಸಂಪೂರ್ಣವಾಗಿ ಐಪಿಎಲ್‌ಗೆ ಅಲಭ್ಯರಾಗುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಸಿಎಸ್‌ಕೆ ತಂಡ ಚೆನ್ನೈನಲ್ಲಿ ಯುಎಇಗೆ ಪ್ರವಾಸ ತೆರಳುವುದಕ್ಕೂ ಮುನ್ನ ಅಭ್ಯಾಸ ಶಿಬಿರವನ್ನು ಆಯೋಜಿಸಿತ್ತು. ಬಹುತೇಕ ಎಲ್ಲಾ ಆಟಗಾರರು ಈ ಶಿಬಿರದಲ್ಲಿ ಪಾಳ್ಗೊಂಡಿದ್ದರು. ಆದರೆ ಹರ್ಭಜನ್ ಸಿಂಗ್ ಇದಕ್ಕೂ ಹಾಜರಾಗಿರಲಿಲ್ಲ. ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನಿಂದ ಅನುಮತಿಯನ್ನು ಪಡೆದು ತಡವಾಗಿ ಸೇರಿಕೊಳ್ಳಲು ಅವಕಾಶವನ್ನು ಪಡೆದುಕೊಂಡಿದ್ದರು. ಭಜ್ಜಿ ತಾಯಿ ಅನಾರೋಗ್ಯ ಪೀಡಿತರಾಗಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಕಾರಣವನ್ನು ನೀಡಿ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸ ಶಿಬಿರದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಅವರು ಮಾಡಿದ್ದು ವೈಯಕ್ತಿಕ ಕಾರಣವನ್ನು ಅವರು ನೀಡಿದ್ದಾರೆ. ಹರ್ಭಜನ್ ಸಿಂಗ್ ತಾಯಿಗೆ ಅನಾರೋಗ್ಯ ಉಂಟಾಗಿರುವ ಕಾರಣವೇ ಅನುಭವಿ ಸ್ಪಿನ್ನರ್ ಐಪಿಎಲ್‌ನಿಂದ ದೂರ ಉಳಿಯಲು ಕಾರಣ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಿಎಸ್‌ಕೆ ತಂಡದಲ್ಲಿ ಕೊರೊನಾ ವೈರಸ್ ಪ್ರಕರಣವೂ ಕಂಡು ಬಂದಿದ್ದು ಸಹಜವಾಗಿಯೇ ಹರ್ಭಜನ್ ಸಿಂಗ್ ಆತಂಕಕ್ಕೆ ಕಾರಣವಿರಬಹುದು. ಈ ಎಲ್ಲಾ ಕಾರಣಗಳಿಂದಾಗಿ ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್‌ನಿಂದ ದೂರ ಉಳಿಯುವುದೇ ಸೂಕ್ತ ಎಂದು ನಿರ್ಧರಿಸಿರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *