`ಸಂಜನಾ, ರಾಗಿಣಿ ಮಜಾ ಮಾಡುವುದಕ್ಕೆಂದೇ ಬಂದವರು’

ತುಮಕೂರು: `ಸ್ಯಾಂಡಲ್ ವುಡ್ ನಟಿಯರಾದ ಸಂಜನಾ, ರಾಗಿಣಿ ನಟಿಯರೇ ಅಲ್ಲ, ಅವರು ಮಜಾ ಮಾಡುವುದಕ್ಕೆಂದೇ ಬಂದವರು’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ. ಸಿಸಿಬಿ ಪೊಲೀಸರು ನೋಟೀಸ್ ನೀಡುತ್ತಾ ಕಾಲಹರಣದ ನಾಟಕ ಮಾಡಬಾರದು. ಮುಲಾಜಿಲ್ಲದೆ ಡ್ರಗ್ಸ್ ನಂಟು ಹೊಂದಿರುವ ನಟಿಯರನ್ನು ಬಂಧಿಸಿ ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ತುಮಕೂರು ನಗರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಪೊಲೀಸರು ವಿಚಾರಣೆ ಹೆಸರಲ್ಲಿ ನಾಟಕ ಆಡುತ್ತಿದ್ದಾರೆ. ಕೆಲವು ನಟಿಯರು ಬಂಧನಕ್ಕೆ ಒಳಪಟ್ಟರೂ ಯಾವುದೇ ಭಯವಿಲ್ಲದೆ ಮಾತಾಡುತ್ತಿದ್ದಾರೆ. ಅವರನ್ನು ತಕ್ಷಣ ಬಂಧಿಸಿ ಎಂದು ಕಿಡಿಕಾರಿದ್ದಾರೆ. ಸಂಜನಾ, ರಾಗಿಣಿ ಕನ್ನಡ ಚಿತ್ರರಂಗವನ್ನು ಹಾಳು ಮಾಡುವುದಕ್ಕೆ ಬಂದಿದ್ದಾರೆ. ಇವರನ್ನು ಒಳಗೆ ಹಾಕಬೇಕು, ಆಗ ಅವರಿಗೆ ಭಯ ಬರುತ್ತದೆ ಎಂದರು. ಡ್ರಗ್ಸ್ ದಂಧೆಯನ್ನು ಒಂದು ನಿರ್ದಿಷ್ಟ ಸಮುದಾಯ ನಡೆಸುತ್ತಿದ್ದು ಪೊಲೀಸರಿಗೆ ಈ ಬಗ್ಗೆ ತಿಳಿದಿದೆ. ಆದರೆ ರಾಜಕಾರಣಿಗಳು ಪೊಲೀಸರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದರು.