ಶರತ್ ಮಡಿವಾಳ ಹತ್ಯೆ ಆರೋಪಿ ಕೊಲೆಯತ್ನ: ಮೂವರ ಸೆರೆ, ಮಾರಕಾಯುಧ ವಶಕ್ಕೆ!

ಮಂಗಳೂರು: ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿ ಶರೀಫ್ ಎಂಬಾತನ ಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಪೊಲೀಸರು ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರ್, ಬೈಕ್ ಮತ್ತು ಮಾರಕಾಯುಧಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತರನ್ನು ಯತಿನ್ ಕಲ್ಲಡ್ಕ, ರಾಜು ಕುಂಪನಮಜಲು ಮತ್ತು ಮನೀಶ್ ಕೋಡಿಕೆರೆ ಎಂದು ಹೆಸರಿಸಲಾಗಿದೆ. ಕಲ್ಲಡ್ಕ, ಸಜೀಪ ಮತ್ತು ಕೋಡಿಕೆರೆಯ ಇತರ ಆರು ಮಂದಿ ಭಾಗಿಯಾಗಿದ್ದು ಅವರು ತಲೆಮರೆಸಿದ್ದಾರೆ.
ಕಳೆದ ಆ.7ರಂದು ಘಟನೆ ನಡೆದಿತ್ತು. ಹತ್ಯೆಗೀಡಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಜೀಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ ಶರೀಫ್ ಎಂಬಾತನನ್ನು ಅಪಘಾತ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾಹಿತಿ ಕಲೆಹಾಕಿ ಮೂವರನ್ನು ಬಂಧಿಸಿದ್ದಾರೆ. ಶರೀಫ್ ಕೊಲೆಯತ್ನ ವಿಫಲಗೊಂಡ ಹಿನ್ನೆಲೆಯಲ್ಲಿ ಇದೇ ತಂಡ ಸುರತ್ಕಲ್ ನ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿ ನೌಶಾದ್ ಉಲ್ಲಂಜೆ ಎಂಬವನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿತ್ತು.
ಆರೋಪಿಗಳು ಸಂಘಪರಿವಾರದ ಕಾರ್ಯಕರ್ತರಾಗಿದ್ದು ಮನೀಶ್ ಮತ್ತು ರಾಜು 2017ರಲ್ಲಿ ಕಂಕನಾಡಿಯಲ್ಲಿ ನಡೆದ ಪ್ರತಾಪ್ ಪೂಜಾರಿ ಕೊಲೆ, ಕೋಮು ಗಲಭೆಗೆ ಪ್ರಚೋಧನೆ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳ ಆರೋಪಿಗಳಾಗಿದ್ಧಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಮತ್ತು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್ಸೈ ಅವಿನಾಶ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದೆ.
