ಲೈನ್‌ ಜಡ್ಜ್‌ಗೆ ಚೆಂಡು ಹೊಡೆದು ಅನರ್ಹಗೊಂಡ ಜೊಕೊವಿಕ್‌!

ನ್ಯೂಯಾರ್ಕ್: ಲೈನ್ ಜಡ್ಜ್‌ಗೆ ಚೆಂಡು ಹೊಡೆದಿರುವ ವಿಶ್ವ ನಂ.1 ಆಟಗಾರ ನೊವಾಕ್ ಜಕೋವಿಕ್ ಯುಎಸ್ ಓಪನ್‌ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ. 4ನೇ ಸುತ್ತಿನ ಪಂದ್ಯದ ಮೊದಲ ಸೆಟ್‌ ವೇಳೆ ಈ ಘಟನೆ ಸಂಭವಿಸಿದೆ.
4ನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ ಮತ್ತು ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಮುಖಾಮುಖಿಯಾಗಿದ್ದರು. ಮೊದಲ ಸೆಟ್‌ನಲ್ಲಿ 5-6ರ ಹಿನ್ನಡೆ ಅನುಭವಿಸಿದ ಜೊಕೋವಿಕ್, ನಿರಾಶೆಗೊಂಡಿದ್ದರು. ಹೀಗಾಗಿ ಸರ್ವ್ ವೇಳೆ ಚೆಂಡನ್ನು ಲೈನ್‌ನಲ್ಲಿ ನಿಂತಿದ್ದ ಜಡ್ಜ್‌ನತ್ತ ಹೊಡೆದರು. ಜೊಕೋವಿಕ್ ಹೊಡೆದ ಚೆಂಡು ಲೈನ್‌ನಲ್ಲಿದ್ದ ಮಹಿಳಾ ಜಡ್ಜ್‌ನ ಭುಜದ ಭಾಗಕ್ಕೆ ಬಲವಾಗಿ ಬಡಿಯಿತು. ಅದು ಗಮನಕ್ಕೆ ಬರುತ್ತಲೇ ಜೊಕೋವಿಕ್ ಕೂಡಲೇ ಮಹಿಳೆಯತ್ತ ಧಾವಿಸಿದವರೇ ಮಹಿಳೆಯಲ್ಲಿ ಕ್ಷಮೆ ಕೇಳಿದರು. ಕುಸಿದು ಬಿದ್ದ ಮಹಿಳೆಯ ನೆರವಿಗೂ ಮುಂದಾದರು. ಆ ಬಳಿಕ ಟೂರ್ನಮೆಂಟ್ ರೆಫರೀ ಸೊರೆನ್ ಫ್ರೀಮೆಲ್ ಆರ್ತರ್ ಆ್ಯಷ್ ಸ್ಟೇಡಿಯಂಗೆ ಬಂದು ಚೇರ್ ಅಂಪೈರ್ ಅರೆಲಿ ಟೂರ್ಟೆ ಜೊತೆ ಮಾತನಾಡಿದರು. ಮತ್ತೆ 33ರ ಹರೆಯದ ಸರ್ಬಿಯನ್, ಮೂರು ಬಾರಿಯ ಯುಎಸ್ ಓಪನ್ ಟ್ರೋಫಿ ಗೆದ್ದ ಜೊಕೋವಿಕ್‌ ಜೊತೆಗೂ ಚರ್ಚೆ ನಡೆಸಿದರು. ತಾನು ಉದ್ದೇಶಪೂರ್ವಕವಾಗಿ ಚೆಂಡು ಹೊಡೆದಿಲ್ಲ ಎಂದು ಚರ್ಚೆಯ ವೇಳೆ ಜೊಕೋವಿಕ್ ಮನವರಿಕೆ ಮಾಡಿದರಾದರೂ ಟೆನಿಸ್ ನಿಯಮದ ಪ್ರಕಾರ ಜೊಕೋವಿಕ್‌ ಅವರನ್ನು ಟೂರ್ನಿಯಿಂದ ಅನರ್ಹಗೊಳಿಸಲಾಯಿತು. ಜೊಕೋವಿಕ್ ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಅನ್ನೋದು ವಿಡಿಯೋ ಗಮನಿಸಿದಾಗಲೂ ಅರಿವಾಗುತ್ತದೆ.

Leave a Reply

Your email address will not be published. Required fields are marked *