ಯುಎಸ್ ಓಪನ್: ಸೆರೆನಾಗೆ ಜಯ

ನ್ಯೂಯಾರ್ಕ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಯುಎಸ್ ಓಪನ್ ಟೆನಿಸ್ನಲ್ಲಿ 6 ಬಾರಿಯ ಚಾಂಪಿಯನ್ ಅಮೆರಿಕಾದ ಸೆರೆನಾ ವಿಲಿಯಮ್ಸ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ತನ್ನದೇ ದೇಶದ ಆದ ಸ್ಲೋಯೆನ್ ಸ್ಟೀಫನ್ಸ್ ಅವರನ್ನು ಸೋಲಿಸಿ ಸೆರೆನಾ ಮುನ್ನಡೆ ಸಾಧಿಸಿದ್ದಾರೆ.
ಮೂರನೇ ಶ್ರೇಯಾಂಕಿತೆ ಸೆರೆನಾ ನಿನ್ನೆ (ಸೆಪ್ಟೆಂಬರ್ 6) ನಡೆದ ಪಂದ್ಯದಲ್ಲಿ 26ನೇ ಶ್ರೇಯಾಂಕಿತೆ ಸ್ಲೋಯೆನ್ ಸ್ಟೀಫನ್ಸ್ ಅವರನ್ನು 2-6, 6-2, 6-2ರ ಅಂತರದಿಂದ ಸೋಲಿಸಿದರು. ಆರಂಭಿಕ ಸೆಟ್ನಲ್ಲಿ ಸೆರೆನಾ ಸೋಲುಂಡು ಆಘಾತ ಅನುಭವಿಸಿದ್ದರು. ಆದರೆ ನಂತರದ ಎರಡೂ ಸೆಟ್ಗಳಲ್ಲಿ ಅಮೋಘ ನಿರ್ವಹಣೆ ನೀಡಿದ ಸೆರೆನಾ ಪಂದ್ಯವನ್ನು ಗೆದ್ದುಕೊಂಡರು. 24ನೇ ಗ್ರ್ಯಾಂಡ್ಸ್ಲ್ಯಾಮ್ ದಾಖಲೆ ನಿರ್ಮಿಸಲು ಎದುರು ನೋಡುತ್ತಿರುವ 38ರ ಹರೆಯದ ಸೆರೆನಾ ಮುಂದಿನ ಸುತ್ತಿನಲ್ಲಿ 15ನೇ ಶ್ರೇಯಾಂಕದ ಮಾರಿಯಾ ಸಕ್ಕಾರಿ ಸವಾಲು ಸ್ವೀಕರಿಸಲಿದ್ದಾರೆ. ಇದೇ ಸಕ್ಕಾರಿ ಕಳೆದ ವಾರ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್ನಲ್ಲಿ ಸೆರೆನಾ ಅವರನ್ನು ಸೋಲಿಸಿದ್ದರು.