ಮಾಧ್ಯಮದ ಉಳಿವಿಗಾಗಿ ಸ್ವಾಯತ್ತತೆ ನೀಡಲು ಒತ್ತಾಯ: ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಸರಕಾರಕ್ಕೆ ಆಗ್ರಹ

ಬೆಳ್ತಂಗಡಿ; ಪ್ರಸ್ತುತ ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು ಅದರಲ್ಲೂ ವಿಶೇಷವಾಗಿ ಸಮಾಜದ ಒಳಿತಿಗಾಗಿ, ಕಟ್ಟಕಡೆಯ ಕುಟುಂಬದ ಅಭಿವೃದ್ಧಿಗಾಗಿ ಉತ್ತಮ ವರದಿಗಳನ್ನು ಮಾಡಿ ಅಂತಹ ಕುಟುಂಬಗಳಿಗೆ ನ್ಯಾಯ ಒದಗಿಸುವ ಮೂಲಕ ಲೋಕಕಲ್ಯಾಣ ಸೇವೆ ಮಾಡುತ್ತಿರುವ ಪತ್ರಿಕಾರಂಗವೂ ಕೂಡ ಇಂದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅದಕ್ಕಾಗಿ ಮಾದ್ಯಮಕ್ಕೆ ಸ್ವಾಯತ್ತತೆ ಘೋಷಣೆ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.ಶ್ರೀ ಕ್ಷೇತ್ರದಲ್ಲಿ ತಮ್ಮ ಚಾರ್ತುಮಾಸ್ಯ ಸಂದರ್ಭದಲ್ಲಿ  ಸೇವೆ ಸಲ್ಲಿಸಿದ ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನು ಗೌರವಿಸಿ ಅವರು ಆಶಿರ್ವಚನ ನೀಡಿದರು‌ ಹಿಂದೆ ಋಷಿಮುನಿಗಳು, ಸಂತರು, ಜ್ಞಾನಿಗಳು ಹಲವಾರು ಬರಹಗಳನ್ನು ತಮ್ಮ ತಪಸ್ಸು ಎಂಬಂತೆ ನೀಡಿದ ಫಲವಾಗಿ ಇಂದಿನ ಜನಾಂಗ ಅದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇಂದು ಅದಕ್ಕೆ ಪೂರಕವಾಗಿ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸೇರಿ ಒಟ್ಟು ಪತ್ರಿಕಾರಂಗ ಸಮಾಜವನ್ನು ಜಾಗೃತಿಗೊಳಿಸುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ‌ಕ್ಷೇತ್ರ ಈಗ ಸಂಕಷ್ಟದಲ್ಲಿದ್ದು ಇವರಿಗೆ ಶಕ್ತಿ ತುಂಬುವ ಕಾರ್ಯ ಸರಕಾರ ಮಾಡಬೇಕು ಎಂದರು.
ಜಿಲ್ಲಾ ಪತ್ರರ್ಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಶೈಕ್ಷಣಿಕ ಸೇವೆ,ಧಾರ್ಮಿಕ ಸಂದೇಶಗಳನ್ನು ನೀಡುವ ಜೊತೆಗೆ  ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ  ಶ್ರೀಗಳ ಸೇವೆ ಅಪಾರವಾದುದು.  ಇವರ ಮಾರ್ಗದರ್ಶನದಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ತುಂಬುತ್ತದೆ ಎಂದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಸೇವೆ, ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಶ್ರೀಗಳ ತ್ಯಾಗದ ಮನೋಭಾವ ಇಡೀ ಬೆಳ್ತಂಗಡಿ ತಾಲೂಕನ್ನು ಜಗತ್ತು ಗುರುತಿಸುವಂತೆ ಮಾಡಿದೆ. ಇಂತಹ ತಾಲೂಕಿನಲ್ಲಿ  ಪತ್ರಕರ್ತರಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನಮ್ಮ ಹಿರಿಯರು ಮಾಡಿದ ಪುಣ್ಯದ ಫಲ ಎಂದರು.
ಜಿಲ್ಲಾ ಪತ್ರರ್ಕರ ಸಂಘದ ಪ್ರಧಾನ ಕಾರ್ಯದರ್ಶಿ ಹಿಬ್ರಾಹಿಂ ಅಡ್ಕಸ್ಥಳ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಹಿಬ್ರಾಹಿಂ ಅಡ್ಕಸ್ಥಳ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ, ಕಾರ್ಯದರ್ಶಿ ಮನೋಹರ್ ಬಳಂಜ, ಉಪಾಧ್ಯಕ್ಷ ದೀಪಕ್ ಅಠವಳೆ, ಪತ್ರಕರ್ತರಾದ ಬಿ.ಎಸ್ ಕುಲಾಲ್, ಶಿಬಿ ಧರ್ಮಸ್ಥಳ, ಮಂಜುನಾಥ ರೈ, ಪುಷ್ಪರಾಜ ಶೆಟ್ಟಿ, ಅಚುಶ್ರೀ ಬಾಂಗೇರು, ಪದ್ಮನಾಭ ಕುಲಾಲ್, ಧನಕೀರ್ತಿ ಅರಿಗ, ಸಂಜೀವ ನೆರಿಯ, ಜಾರಪ್ಪ ಪೂಜಾರಿ, ಪ್ರಸಾದ್ ಶೆಟ್ಟಿ ಇವರನ್ನು ಶ್ರೀಗಳು ಗೌರವಿಸಿದರು. 
ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕರಾಮ ಸಾಲಿಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *