ಮನೆಯಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ದಾಸ್ತಾನು: ಆರೋಪಿ ಸೆರೆ

ಮಂಗಳೂರು: ಮನೆಯಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಗಾಂಜಾ ದಾಸ್ತಾನು ಮಾಡಿರುವ ಖಚಿತ ಮಾಹಿತಿಯ ಮೇರೆಗೆ ಮನೆ ಮೇಲೆ ದಾಳಿ ನಡೆಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ಪುರಸಭಾ ವ್ಯಾಪ್ತಿಯ ಪರ್ಲಿಯಾ ನಿವಾಸಿ ಅಹಮ್ಮದ್ ಸಾಬಿತ್(30) ಎಂದು ಹೆಸರಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯಿಂದ 39 ಕೆ.ಜಿ. 948 ಗ್ರಾಂ ತೂಕದ 19,97,400 ರೂ. ಮೌಲ್ಯದ ಗಾಂಜಾ ಸ್ವಾಧೀನಪಡಿಸಿಕೊಂಡಿದ್ದಾರೆ. ಸಾಬಿತ್ ಮತ್ತು ಇನ್ನೋರ್ವ ಆರೋಪಿ ಪರ್ಲಿಯಾದ ಬಾಡಿಗೆ ಕೊಠಡಿಯಲ್ಲಿ ಗಾಂಜಾ ದಾಸ್ತಾನು ಇರಿಸಿದ್ದ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೋಲೀಸರು ದಾಳಿ ನಡೆಸಿದ್ದಾರೆ. ಎಸ್.ಪಿ. ಲಕ್ಮೀಪ್ರಸಾದ್ ಅವರ ನಿರ್ದೇಶನದಂತೆ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಎಸ್. ಐ.ಅವಿನಾಶ್ ಅವರ ತಂಡ ದಾಳಿ ಕಾರ್ಯಾಚರಣೆ ನಡೆಸಿದೆ.