ಬಟ್ಲರ್ ಏಕಾಂಗಿ ಹೋರಾಟ: ಟಿ-ಟ್ವೆಂಟಿ ಸರಣಿ ಆಂಗ್ಲರ ವಶ

ಸೌಥಂಪ್ಟನ್: ಜೋಸ್ ಬಟ್ಲರ್ ನಡೆಸಿದ ಜವಾಬ್ದಾರಿಯುತ ಹಾಗೂ ಆಕರ್ಷಕ ಅರ್ಧಶತಕ ನೆರವಿನಿಂದ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಟಿ-ಟ್ವೆಂಟಿ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿಯನ್ನು ೨-೦ ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೫೭ ರನ್ ಗಳಿಸಿತು. ಡೇವಿಡ್ ವಾರ್ನರ್ ಶೂನ್ಯಕ್ಕೆ ನಿರ್ಗಮಿಸಿದರೆ ಕ್ಯಾರಿ (೨) ಹಾಗೂ ಸ್ಟೀವನ್ ಸ್ಮಿತ್ (೧೦) ಕೂಡ ಹೆಚ್ಚು ನಿಲ್ಲಲಿಲ್ಲ. ಆದರೆ ಆರೋನ್ ಫಿಂಚ್ (೪೦) ಹಾಗೂ ಸ್ಟೊಯ್ನಿಸ್ (೩೫) ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದರು. ಅಲ್ಲದೆ ಗ್ಲೆನ್ ಮ್ಯಾಕ್ಸ್‌ವೆಲ್ (೨೬) ಹಾಗೂ ಆಸ್ಟನ್ ಆಗರ್ (೨೩) ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಅತ್ತ ಆಂಗ್ಲ ಪರ ಕ್ರಿಸ್ ಜೋರ್ಡನ್ ಎರಡು ವಿಕೆಟ್ ಪಡೆದರು.
ಅತ್ತ ಗುರಿ ಬೆನ್ನತ್ತಿದ ಆಂಗ್ಲ ಪರ ಜೋಸ್ ಬಟ್ಲರ್ ಹಾಗೂ ಡೇವಿಡ್ ಮಲಾನ್ ನಡೆಸಿದ ಅಮೋಘ ಆಟ ಆಸೀಸ್ ಆಟಗಾರರಿಗೆ ಶಾಕ್ ನೀಡಿತು. ಅದರಲ್ಲೂ ಬಟ್ಲರ್ ಬಹುತೇಕ ಏಕಾಂಗಿಯಾಗಿಯೇ ತಂಡಕ್ಕೆ ಜಯ ತಂದುಕೊಟ್ಟರು. ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಬಟ್ಲರ್ ಅಜೇಯ ೭೭ ರನ್ ಗಳಿಸಿದರೆ ಮಲಾನ್ ಆಕರ್ಷಕ ೪೨ ರನ್ ಗಳಿಸಿ ಔಟಾದರು. ಈ ನಡುವೆ ಟಾಮ್ ಬಾಂಟನ್ (೨), ಬೈರ್‌ಸ್ಟೋ (೯) ಹಾಗೂ ಇಯಾನ್ ಮಾರ್ಗನ್ (೭) ವಿಫಲತೆ ಕಂಡರು. ಅಂತಿಮವಾಗಿ ತಂಡ ೧೮.೫ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೫೮ ರನ್ ಗಳಿಸಿ ಜಯ ಸಾಧಿಸಿತು. ಆಸೀಸ್ ಪರ ಆಗರ್ ಎರಡು ವಿಕೆಟ್ ಪಡೆದರು.