ಚೀನಾದ ಯುದ್ಧ ವಿಮಾನ ಹೊಡೆದುರುಳಿಸಿದ ತೈವಾನ್‌?

ತೈಪೆ: ತನ್ನ ನೆರೆಹೊರೆಯ ರಾಷ್ಟ್ರಗಳ ಜೊತೆ ಚೀನಾ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪದೇ ಪದೇ ಉದ್ದೇಶಪೂರ್ವಕವಾಗಿ ಗಡಿಯಲ್ಲಿ ತಂಟೆ ನಡೆಸುವ ಮೂಲಕ ಚೀನಾ ತನ್ನ ನೆರೆಯ ರಾಷ್ಟ್ರಗಳಿಗೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಚೀನಾ ವಿರುದ್ಧ ನೆರೆಯ ತೈವಾನ್‌ ಕಠಿಣ ಕ್ರಮ ತೆಗೆದುಕೊಂಡಿದೆ. ಸದ್ಯ ತೈವಾನ್ ಭೂ ಪ್ರದೇಶಕ್ಕೆ ಪ್ರವೇಶಿಸಿದ ಚೀನಾದ ಯುದ್ಧ ವಿಮಾನವನ್ನು ತೈವಾನ್‌ ಹೊಡೆದುರುಳಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ರಷ್ಯಾ ನಿರ್ಮಿತ ಸುಖೋಯ್‌ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ಬಿದ್ದಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಈ ಯುದ್ದ ವಿಮಾನವನ್ನು ತೈವಾನ್‌ ಹೊಡೆದುರುಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಾಯುಗಡಿ ಉಲ್ಲಂಘಿಸಿ ತನ್ನ ಭೂ ಪ್ರದೇಶದಲ್ಲಿ ಹಾರಾಟ ಮಾಡಿದ್ದಕ್ಕೆ ತೈವಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ತೈವಾನ್‌ ವಿಮಾನವನ್ನು ಹೊಡೆದು ಹಾಕಿದೆಯೇ ಅಥವಾ ತಾಂತ್ರಿಕ ಕಾರಣದಿಂದ ವಿಮಾನ ಪತನಗೊಂಡಿತ್ತಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಎರಡು ಸರ್ಕಾರಗಳು ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಕುರಿತು ಟ್ವಿಟರ್‌ನಲ್ಲಿಯೂ ಭಾರಿ ಚರ್ಚೆಯಾಗುತ್ತಿದ್ದು, #ತೈವಾನ್‌ ಹಾಗೂ #ಸು-೩೫ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

Leave a Reply

Your email address will not be published. Required fields are marked *