ಗೋಸಾಗಾಟ ಆರೋಪ: ಯುವಕನಿಗೆ ಮಾರಣಾಂತಿಕ ಹಲ್ಲೆ

ಹೆಬ್ರಿ: ಇತ್ತೀಚೆಗೆ ಗೋಸಾಗಾಟ ವಿಚಾರಕ್ಕೆ ಸಂಬಂಧಿಸಿ ಸುಜಯ್ ದೇವಾಡಿಗ(30) ಎಂಬವರಿಗೆ ತಂಡವೊಂದು ನಿನ್ನೆ ಸಂಜೆ ಮಾರಣಾಂತಿಕ ಹಲ್ಲೆಗೈದ ಬಗ್ಗೆ ದೂರು ದಾಖಲಾಗಿದೆ. ಈದು ಗ್ರಾಮದ ಗುಮ್ಮೆಟ್ಟು ನಿವಾಸಿ ಸುಜಯ್ ದೇವಾಡಿಗ ತನ್ನ ಮನೆ ಸಮೀಪ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಬಜರಂಗದಳ ಕಾರ್ಯಕರ್ತರಾದ ಯೋಗೀಶ್ ಯಾನೆ ಮುನ್ನಾ, ರವಿ ಆಚಾರ್ಯ, ಅಶೋಕ್ ಯಾನೆ ಅಭಿ, ನಿತಿನ್ ಹಾಗೂ ಇತರ 17 ಮಂದಿ ಅಡ್ಡಗಟ್ಟಿ ಹಲ್ಲೆಗೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಸುಜಯ್ ದೇವಾಡಿಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಜು.22ರಂದು ಕೂಲಿ ಕಾರ್ಮಿಕ ಈದು ಗ್ರಾಮದ ಜಂಗೊಟ್ಟು ಕಾಲನಿಯ ಸೀತಾರಾಮ ಮಲೆಕುಡಿಯ, ಹೈನುಗಾರಿಕೆಗಾಗಿ ನೆರೆಮನೆಯ ಬಾಬು ಪೂಜಾರಿಯಿಂದ ಹಸುವೊಂದು ಖರೀದಿಸಿದ್ದರು. ಅದನ್ನು ಬಾಬು ಪೂಜಾರಿ ಮತ್ತು ಸುಜಯ ದೇವಾಡಿಗ, ಸೀತಾರಾಮ ಮಲೆಕುಡಿಯರ ಮನೆಗೆ ತಂದು ಹಟ್ಟಿಯಲ್ಲಿ ಕಟ್ಟಿದ್ದರು. ಅದೇ ದಿನ ಸಂಜೆ ಬಕ್ರೀದ್ ಹಬ್ಬಕ್ಕಾಗಿ ಆಡು ಖರೀದಿಸಲು ಬಂದ ಅಬ್ದುಲ್ ರಹ್ಮಾನ್ ಅವರ ಕಾರನ್ನು ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ಧ್ವಂಸ ಮಾಡಿದ್ದರು. ನಂತರ 50ಕ್ಕೂ ಅಧಿಕ ಬಜರಂಗದಳದ ಕಾರ್ಯಕರ್ತರು ಸೀತಾರಾಮ ಮಲೆಕುಡಿಯರ ಮನೆಗೆ ನುಗ್ಗಿ ಸೀತಾರಾಮ ಅವರನ್ನು ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾಗಿ ದೂರಲಾಗಿತ್ತು. ಈ ವೇಳೆ ಸುಜಯ್ ದೇವಾಡಿಗ ಓಡಿ ತಪ್ಪಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಮತ್ತೆ ತಂಡ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.