ಕೋವಿಫೋರ್’ ಇಂಜೆಕ್ಷನ್, `ಯುನಿಟಿ’ ಆಸ್ಪತ್ರೆಯ ದುಬಾರಿ ದರ! ಸಮಗ್ರ ತನಿಖೆಗೆ ಡಿವೈಎಫ್‌ಐ ಒತ್ತಾಯ

ಜಯಕಿರಣ ವರದಿ
ಮಂಗಳೂರು: ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ‘ಕೋವಿಫೋರ್’ ಚುಚ್ಚುಮದ್ದಿಗೆ ನಿಗದಿತ ಬೆಲೆಗಿಂತ ಎರಡು ಪಾಲು ಅಧಿಕ ದರ ವಿಧಿಸುತ್ತಿರುವುದು ಹಾಗೂ ಯುನಿಟಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ವಿಧಿಸಲಾಗುತ್ತಿರುವ ದುಬಾರಿ ದರದ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ, ದಾಖಲೆಸಹಿತ ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದೆ. 
‘ಕೋವಿಫೋರ್’ ಚಚ್ಚುಮದ್ದು ಹೊರಗಡೆ ೨,೨೦೦ ರೂಪಾಯಿಗೆ ಸಿಗುತ್ತಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ೫,೪೦೦ ರೂಪಾಯಿ ದರ ವಿಧಿಸಲಾಗುತ್ತಿದೆ. ವಿಪರೀತ ಲಾಭದ ಕಾರಣಕ್ಕಾಗಿಯೇ ಸೋಂಕಿತರಿಗೆ ಆರು ಚಚ್ಚುಮದ್ದು ನೀಡಲಾಗುತ್ತಿರುವ ಅನುಮಾನ ಇದೆ. ಈ ಔಷಧಿಯ ಬಳಕೆಗೆ ಸರಕಾರದಿಂದ ಬಿಗು ಶರತ್ತುಗಳಿದ್ದರೂ ಖಾಸಗಿ ಆಸ್ಪತ್ರೆಗಳು ಲಾಭದ ಆಸೆಗೆ ಶರತ್ತುಗಳನ್ನು ಮೀರಿರುವ ಅನುಮಾನ ಕಾಡುತ್ತಿದೆ. ಈ ಬಗ್ಗೆ ವಿವರವಾದ ತನಿಖೆ ನಡೆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ನಡೆಯುವ ಅವ್ಯವಹಾರ ಬಯಲಿಗೆ ಬರಬಹುದು ಎಂದು ಡಿವೈಎಫ್‌ಐ ಮನವಿಯಲ್ಲಿ ತಿಳಿಸಿದೆ. 
ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರಕಾರ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚಿಕಿತ್ಸೆಗೆ ವಿಧಿಸುವ ದರಗಳ ಬಗ್ಗೆಯೂ ಸ್ಪಷ್ಟವಾದ ಆದೇಶ ನೀಡಿದೆ. ಸರಕಾರದ ಆದೇಶದ ಪ್ರಕಾರ ನಿಗದಿಪಡಿಸಲಾಗಿರುವ ದರ ತೀರಾ ದುಬಾರಿ ಆಗಿದೆ ಎಂದು ಡಿವೈಎಫ್‌ಐ ಸೇರಿದಂತೆ ಹಲವು ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೂ ಖಾಸಗಿ ಆಸ್ಪತ್ರೆಗಳು ಈ ದರವನ್ನೂ ಮೀರಿ ಹೆಚ್ಚುವರಿ ದರ ವಿಧಿಸುತ್ತಿರುವುದು ದಿನನಿತ್ಯ ವರದಿಯಾಗುತ್ತಿದೆ. ಸೋಂಕಿತ ವ್ಯಕ್ತಿಯೋರ್ವರು ಸಾಮಾನ್ಯ ಕೋಣೆಯಲ್ಲಿ ಸಣ್ಣಮಟ್ಟಿನ ನ್ಯೂಮೋನಿಯಾ, ಉಸಿರಾಟದ ತೊಂದರೆಯೊಂದಿಗೆ ದಾಖಲಾಗಿದ್ದರು. ಸರಕಾರದ ನಿಯಮ ಪ್ರಕಾರ ಇವರಿಗೆ  ಔಷಧಿ, ಪರೀಕ್ಷೆ ಎಲ್ಲಾ ಸೇರಿ ದಿನವೊಂದಕ್ಕೆ ೧೨,೦೦೦ ದರ ವಿಧಿಸಬೇಕಿತ್ತಾದರೂ ಯುನಿಟಿ ಆಸ್ಪತ್ರೆ, ವಾರ್ಡ್ ಸರ್ವೀಸ್ ಅಂತ ಆಮ್ಲಜನಕ ನೀಡಿದ್ದಕ್ಕೆ ದಿನವೊಂದಕ್ಕೆ ಹೆಚ್ಚುವರಿ ೪,೫೦೦ ರೂಪಾಯಿಯಂತೆ ೧೦ ದಿನಕ್ಕೆ ೪೫,೦೦೦ ಸಾವಿರ ರೂಪಾಯಿ ದರ ವಿಧಿಸಿದೆ. ರಕ್ತ ಪರೀಕ್ಷೆಗಳಿಗೆ ೧೫,೦೦೦ ಹೆಚ್ಚುವರಿ ದರ, ಔಷಧಿಗಳಿಗಂತೂ ಅತ್ಯಂತ ದುಬಾರಿಯಾದ ಒಂದು ಲಕ್ಷ ರೂಪಾಯಿ ದರ ವಿಧಿಸಿದೆ. ಒಟ್ಟಾರೆ ೧೧ ದಿನಗಳಿ ಸರಿಸುಮಾರು ಮೂರು ಲಕ್ಷ ರೂಪಾಯಿ ಬಿಲ್ ವಿಧಿಸಿದ್ದಲ್ಲದೆ, ರೋಗಿಯ ಮನೆಯವರಿಗೆ ವಿವರವಾದ ಬಿಲ್ ನೀಡದೆ ಕತ್ತಲಲ್ಲಿಟ್ಟಿದೆ ಎಂದು ಆರೋಪಿಸಿರುವ ಡಿವೈಎಫ್‌ಐ, ಇದಕ್ಕೆ ಸಂಬಂಧಿಸಿದ ಬಿಲ್ ಕೂಡಾ ಜಿಲ್ಲಾಧಿಕಾರಿಗೆ ನೀಡಿದೆ.   
ಸರಕಾದ ಸ್ಪಷ್ಟ ಆದೇಶಗಳ ಹೊರತಾಗಿಯೂ ಮಂಗಳೂರಿನ ಖಾಸಗಿ ಆಸ್ಪತ್ರೆಗಳು ನಿಯಮ ಮೀರಿ ವಿಪರೀತ ದರಗಳನ್ನು ವಿಧಿಸುತ್ತಿರುದರಿಂದ ಜನಸಾಮಾನ್ಯರು ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳು ಕಾಣಿಸಿಕೊಂಡರೂ ಆಸ್ಪತ್ರೆಗಳಿಗೆ ದಾಖಲಾಗಲು ಹಿಂಜರಿಯುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡಿರುವ ಕೆಟ್ಟ ಸಂದರ್ಭವನ್ನೂ ನಿಯಮಬಾಹಿರವಾಗಿ ಲಾಭದಾಯಕ ಸಂದರ್ಭವಾಗಿ ಪರಿವರ್ತಿಸಲು ಯತ್ನಿಸುತ್ತಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಆಟಾಟೋಪಗಳಿಗೆ ಕಡಿವಾಣ ಹಾಕಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ. ಮನವಿ ಮಾಡಿದ ನಿಯೋಗದಲ್ಲಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಅಶ್ರಫ್ ಕೆ.ಸಿ.ರೋಡು, ನಿತಿನ್ ಕುತ್ತಾರ್ ಹಾಗೂ ಸುನಿಲ್ ತೇವುಲ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *