ಕೊಹ್ಲಿ, ಫಿಂಚ್‌ ದಾಖಲೆ ಸರಿದೂಗಿಸಿದ ಬಾಬರ್‌

ಮ್ಯಾಂಚೆಸ್ಟರ್‌: ಪಾಕಿಸ್ತಾನ ನಾಯಕ ಬಾಬರ್ ಅಝಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 1500 ರನ್ ಬಾರಿಸಿದ ವಿಶ್ವದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಈಗ ಪಾಕ್ ನಿಗದಿತ ಓವರ್‌ಗಳ ಕ್ರಿಕೆಟ್‌ನ ನಾಯಕ ಬಾಬರ್ ಅಝಮ್ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್‌ಗೆ ಸರಿ ಸಮಾನಾದ ಸಾಧನೆ ಬಾಬರ್ ತೋರಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1500 ರನ್ ಗಡಿ ದಾಟೋಕೆ ಬಾಬರ್ ಅಝಮ್‌ಗೆ 29 ರನ್‌ಗಳು ಬೇಕಿತ್ತು. ಭಾನುವಾರ 39ನೇ ಇನ್ನಿಂಗ್ಸ್ ಆಡಿದ ಬಾಬರ್ 56 ರನ್ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದರು. ಸದ್ಯ ಬಾಬರ್ ಟಿ20ಐಯಲ್ಲಿ 1527 ರನ್ ದಾಖಲೆ ಹೊಂದಿದ್ದಾರೆ. ಬಾಬರ್ ದಾಖಲೆಯೀಗ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ದಾಖಲೆಗೆ ಸಮವಾಗಿದೆ. ಕೊಹ್ಲಿ ಮತ್ತು ಫಿಂಚ್ ಕೂಡ 39ನೇ ಇನ್ನಿಂಗ್ಸ್‌ನಲ್ಲಿ ಟಿ20ಐ 1500 ರನ್ ಮೈಲಿಗಲ್ಲು ತಲುಪಿದ್ದರು. ಈ ಮೊದಲು ಕೊಹ್ಲಿ ಟಿ20ಯಲ್ಲಿ ನಂ.1 ಸ್ಥಾನದಲ್ಲಿದ್ದರು, ಈಗ ಬಾಬರ್ ಇದ್ದಾರೆ. ಆದರೆ ಬಾಬರ್ ಅವರು ಕೊಹ್ಲಿಗಿಂತ ಅರ್ಧಕ್ಕೂ ಕಡಿಮೆ ಪಂದ್ಯಗಳನ್ನಾಡಿದ್ದಾರೆ ಅನ್ನೋದು ಇಲ್ಲಿ ಗಮನಾರ್ಹ ಸಂಗತಿ. ಕೊಹ್ಲಿ ಸದ್ಯ 82 ಟಿ20ಐ ಪಂದ್ಯಗಳನ್ನಾಡಿದ್ದರೆ, ಬಾಬರ್ 40 ಪಂದ್ಯಗಳನ್ನಾಡಿದ್ದಾರೆ. ಟಿ20ಐನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ಈಗ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಕೊಹ್ಲಿ 82 ಇನ್ನಿಂಗ್ಸ್‌ಗಳಲ್ಲಿ 2794 ರನ್ ಬಾರಿಸಿದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ (108 ಇನ್ನಿಂಗ್ಸ್‌ಗಳಲ್ಲಿ 2773 ರನ್), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (88 ಇನ್ನಿಂಗ್ಸ್‌, 2536 ರನ್), ಪಾಕಿಸ್ತಾನದ ಶೋಯೆಬ್ ಮಲಿಕ್ (115 ಇನ್ನಿಂಗ್ಸ್‌ಗಳಲ್ಲಿ 2335 ರನ್), ಇಂಗ್ಲೆಂಡ್‌ನ ಇಯಾನ್ ಮಾರ್ಗನ್ (91 ಇನ್ನಿಂಗ್ಸ್‌, 2218 ರನ್) ಇದ್ದಾರೆ. 2ನೇ ಟಿ20ಐ ಪಂದ್ಯದ ಸ್ಕೋರ್‌ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಬಾಬರ್ 56, ಫಖರ್ ಝಮಾನ್ 36 ರನ್, ಮೊಹಮ್ಮದ್ ಹಫೀಝ್ 69, ಶೋಯೆನ್ ಮಲಿಕ್ 14 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 195 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಟಾಮ್ ಬ್ಯಾಂಟಮ್ 20, ಜಾನಿ ಬೈರ್ಸ್ಟೋವ್ 44, ಡೇವಿಡ್ ಮಲನ್ 54, ನಾಯಕ ಇಯಾನ್ ಮಾರ್ಗನ್ 66 ರನ್‌ನೊಂದಿಗೆ 19.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 199 ರನ್ ಮಾಡಿತು.

Leave a Reply

Your email address will not be published. Required fields are marked *