ಕೊರೊನಾ ಸೋಂಕಿತರು ಪ್ರಥಮ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ: ಖ್ಯಾತ ವೈದ್ಯ ಡಾ. ಹಂಸರಾಜ ಆಳ್ವ

ಮಂಗಳೂರು: ಕೊರೊನಾ ಸೋಂಕಿತರು ಪ್ರಥಮ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿನ ಲಕ್ಷಣಗಳು ಹೆಚ್ಚಾದ ಮೇಲೆ ವೈದ್ಯರ ಬಳಿ ಬರುವುದು ಸರಿಯಲ್ಲ. ಕೊರೊನಾ ಪರೀಕ್ಷೆಗೆ ಯಾವುದೇ ಭಯ ಪಡಬೇಕಾಗಿಲ್ಲ ಎಂದು ನಗರ ಖ್ಯಾತ ವೈದ್ಯ ಡಾ. ಹಂಸರಾಜ ಆಳ್ವ ತಿಳಿಸಿದರು.

ಅವರು ಶುಕ್ರವಾರ ನಗರದ ವಿನಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ವೆಂಟಿಲೇಟರ್‍ಗಳ ಸಮಸ್ಯೆ ಇದೆ ಎಂದು ಮಾತ್ರ ಹೇಳುತ್ತಿದ್ದಾರೆ. ಕೇವಲ ವೆಂಟಿಲೇಟರ್‍ನಿಂದ ಜೀವ ಉಳಿಸಲು ಸಾಧ್ಯವಿಲ್ಲ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗಲೇ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿ ಮಾಡಬೇಕು. ಪ್ರಾಥಮಿಕ ಹಂತದಲ್ಲಿ ಸೋಂಕಿನ ಪರೀಕ್ಷೆ ಮಾಡಿಸಿದಲ್ಲಿ ಸೋಂಕನ್ನು ಬೇಗ ಗುಣಪಡಿಸಬಹುದು ಎಂದರು.

ದೇಶದಲ್ಲಿ ಪ್ರತೀ ದಿನ ಒಂದು ಲಕ್ಷ ಜನ ಕೋಂಕಿಗೆ ಗುರಿಯಾಗುತ್ತಿದ್ದಾರೆ. ಮಾತ್ರವಲ್ಲ 5 ಸಾವಿರ ಜನ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಜನರು ಸೋಂಕಿಗೆ ಹೆದರುತ್ತಿದ್ದು, ಸೋಂಕಿನ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಸಬೇಕು. ಕೊರೊನಾ ಸೋಂಕು ಆರೋಗ್ಯವಂತರಲ್ಲಿ 10-12 ದಿನಗಳಲ್ಲಿ ಇದ್ದು ಗುಣವಾಗುತ್ತದೆ. ಆದರೆ ಯಾರಿಗೆ ಆರೋಗ್ಯದಲ್ಲಿ ಬೇರೆ ಖಾಯಿಲೆಗಳು ಇರುತ್ತವೆ ಅವರಿಗೆ ತೊಂದರೆ ಕೊಡುತ್ತದೆ. ಆದುದರಿಂದ ಮನೆಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಲ್ಲಿ 5ನೇ ದಿನ ಮನೆಯಲ್ಲಿ ಇರುವವರೆಲ್ಲ ಸ್ವಯಂ ಪ್ರೇರಿತವಾಗಿ ಪರೀಕ್ಷಿಸಿಕೊಂಡಲ್ಲಿ ಸೋಂಕನ್ನು ಗುಣಪಡಿಸಬಹುದು ಎಂದು ಹೇಳಿದರು.

ಯಾರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ನೇರವಾಗಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬೇಕು. ಈ ಸೋಂಕಿನಿಂದ ರಕ್ತ ಹೆಪ್ಪುಗಟ್ಟುತ್ತ ಹೋಗುತ್ತದೆ. ರಕ್ತ ಹೆಪ್ಪುಗಟ್ಟುವ ಸಂದರ್ಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು. ರಕ್ತ ಹೆಪ್ಪುಗಟ್ಟಿದ ಮೇಲೆ ಚಿಕಿತ್ಸೆ ಪಡೆಯುವುದು ಸೂಕ್ತವಲ್ಲ. ಕೊರೊನಾ ಸೋಂಕಿಗೆ ಪ್ಲಾಸ್ಮಾ ತೆರಪಿ ನಡೆಯುತ್ತಿದ್ದು, ಅದು ಯಾರಲ್ಲಿ ರೋಗನಿರೋಧಕ ಶಕ್ತಿ ಯಾರಲ್ಲಿ ಕಡಿಮೆ ಇರುತ್ತದೆ ಅವರಿಗೆ ಈ ತೆರಪಿಯನ್ನು ಮಾಡಬಹುದು. ಅದನ್ನು ಎಲ್ಲರಿಗೂ ಮಾಡಲಾಗುವುದಿಲ್ಲ ಹಾಗೂ ಅದು ಸಂಪೂರ್ಣ ಯಶಸ್ವಿಯಾಗದು, ಆದುದರಿಂದ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.

ದೇಶದಾದ್ಯಂತ 380 ಮಂದಿ ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲಿ ರಾಜ್ಯದಲ್ಲಿ 48 ಮಂದಿ ಬಲಿಯಾಗಿದ್ದಾರೆ. ಆದರೆ ಇಲ್ಲಿಯ ತನಕ ರಾಜ್ಯದಲ್ಲಿ ಗುರುವಾರ ಒಬ್ಬರು ರಾಜಕಾರಣಿ ಮಾತ್ರ ಮೃತಪಟ್ಟಿದ್ದಾರೆ. ಬೇರೆ ಜನರಿಗಿಂತ 17 ಪಟ್ಟು ಹೆಚ್ಚು ಸೋಂಕಿನ ಪರಿಣಾಮ ಬೀಳುವುದರಿಂದ ಇಷ್ಟು ಮಂದಿ ವೈದ್ಯರು ಬಲಿಯಾಗಿದ್ದಾರೆ ಎಂದು ತಿಳಿಸಿದರು.

ಕೊರೊನಾ ಸೋಂಕಿನ ಭಯದಿಂದ ಜನರು ಕಷಾಯ, ಅರಿಶಿಣ ಮೊದಲಾದವುಗಳನ್ನು ಅತಿಯಾಗಿ ಸೇವಿಸುತ್ತಿರುವುದರಿಂದ ಜನರು ಬೇರೆ ರೀತಿಯ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಇದೆಲ್ಲ ಆರೋಗ್ಯಕ್ಕೆ ಮತ್ತೊಂದು ರೀತಿಯಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದುದರಿಂದ ಸೋಂಕನ್ನು ತಡೆಯಲು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸುವುದು, ಆಗಾಗ ಕೈ ತೊಳೆಯುವುದನ್ನು ಮಾಡುವುದರಿಂದ ಸೋಂಕಿನಿಂದ ದೂರ ಇರಬಹುದು ಎಂದು ಹಂಸರಾಜ ಹೇಳಿದರು.

ಸರ್ಕಾರ ಪ್ರಾಥಮಿಕ ಸೋಂಕಿತರನ್ನು ಮೊದಲು ಪತ್ತೆ ಮಾಡಬೇಕು. ಅದರೊಂದಿಗೆ ಅವರೊಂದಿಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಅವರನ್ನು ಗುರುತಿಸಬೇಕು. ವೆಂಟಿಲೇಟರ್ ಬದಲು ಪಲ್ಸ್ ಅವೇಕ್ಸ್ ಅನ್ನು 1500 ರೂ. ಖರ್ಚುಮಾಡಿ ತರುವುದರಿಂದ ಸೋಂಕನ್ನು ಕಡಿಮೆಗೊಳಿಸಬಹುದು. ಮಾತ್ರವಲ್ಲ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

1 thought on “ಕೊರೊನಾ ಸೋಂಕಿತರು ಪ್ರಥಮ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ: ಖ್ಯಾತ ವೈದ್ಯ ಡಾ. ಹಂಸರಾಜ ಆಳ್ವ

Leave a Reply

Your email address will not be published. Required fields are marked *