ಕಟೀಲು ದೇವಳ: ಆಡಳಿತ ಮತ್ತು ಅರ್ಚಕರ ಮೇಲೆ 50 ಆರೋಪ ಪಟ್ಟಿ! ಕ್ಷೇತ್ರಾಭಿವೃದ್ಧಿ ಸಮಿತಿಯ ಮೂಲಕ ಹೋರಾಟಕ್ಕೆ ಸಜ್ಜು!!

ಮಂಗಳೂರು: ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಹಾಗೂ ಕಟೀಲು ದೇವಿಯ ಭಕ್ತರ ಸಭೆ ಇತ್ತೀಚೆಗೆ ಕಟೀಲಿನ ಗ್ರಾಂಡ್ ಕಟೀಲು ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನಾಗರಾಜ ರಾಯರು ವಹಿಸಿದ್ದರು. ಸಾಮಾಜಿಕ ಜಾಲತಾಣ ಮತ್ತು ವಿವಿಧ ಮೂಲಗಳಿಂದ ಕಟೀಲು ದೇವಳದ ಆಡಳಿತ ವ್ಯವಸ್ಥೆಯ ವೈಫಲ್ಯಗಳು, ದೇವಳದ ಒಳ ನೌಕರರೆಂದು ಹೇಳಲ್ಪಡುವ ಕೆಲವು ಅರ್ಚಕರ ದಬ್ಬಾಳಿಕೆ, ಸೇವೆಯಲ್ಲಿ ಆಗುವ ಅವ್ಯವಹಾರಗಳು, ಕಟೀಲು ದೇವರಿಗೂ ಮಾಗಣೆಗೂ ಇರುವ ಪೂರ್ವಪದ್ಧತಿಯ ಸಂಪ್ರದಾಯ, ನಂಬಿಕೆ ಕಟ್ಟುಕಟ್ಟಲೆಗಳಿಗೆ ಧಕ್ಕೆ ತಂದಿರುವುದು, ಶಿಬರೂರು ಕೊಡಮಣಿತ್ತಾಯ ದೈವಕ್ಕೆ ಆದ ಅಪಮಾನ ಮುಂತಾದ ವಿಚಾರಗಳ ಕುರಿತು ಸಾಕ್ಷಿ, ಪುರಾವೆಗಳನ್ನು ಕೊಡೆತ್ತೂರು ಮಾಗಣೆ ಮತ್ತು ದೇವಳದ ಭಕ್ತರು ಸಭೆಯಲ್ಲಿ ಪ್ರಸ್ತುತಪಡಿಸಿ ಚರ್ಚಿಸಿದರು. ದೇವಳದ ಆಡಳಿತ ವ್ಯವಸ್ಥೆ ಮತ್ತು ಅರ್ಚಕರ ಭ್ರಷ್ಟಾಚಾರದ ಬಗ್ಗೆ ಸುಮಾರು 50 ಆರೋಪಗಳನ್ನು ಪಟ್ಟಿ ಮಾಡಿ ಸಭೆಯಲ್ಲಿ ಮಂಡಿಸಲಾಯಿತು. ಆರೋಪಗಳನ್ನು ಉನ್ನತ ಮಟ್ಟದ ತನಿಖೆಗಾಗಿ ಸರಕಾರದ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಒತ್ತಾಯಿಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕಟೀಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಮಗ್ರವಾದ ನ್ಯಾಯಯುತ ಹೋರಾಟಕ್ಕಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಾಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಯರಾಮ ಮುಕ್ಕಾಲ್ದಿ ಭಂಡಾರ ಮನೆ, ಅಧ್ಯಕ್ಷರಾಗಿ ಕೆ.ವಿ.ಶೆಟ್ಟಿ ಕೊಡೆತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಇವರನ್ನು ಆರಿಸಲಾಯಿತು.
ಶ್ರೀಧರ ಆಳ್ವ ಮಾಗಂದಡಿ, ಪ್ರೇಮನಾಥ ಶೆಟ್ಟಿ ಮಿತ್ತಬೈಲುಗುತ್ತು, ವಿಜಯ ಶೆಟ್ಟಿ ಅಜಾರುಗುತ್ತು, ಮೋಹನ್ ಶೆಟ್ಟಿ ಮೂಡು ದೇವಸ್ಯ, ರವಿರಾಜ್ ಶೆಟ್ಟಿ ಬಾಳಿಕೆ ಮನೆ, ಜಯರಾಮ ಶೆಟ್ಟಿ ಕೊಂಡೇಲಗುತ್ತು, ಶಂಕರ ಶೆಟ್ಟಿ ಮುಡಾಯಿಗುತ್ತು, ಜಯರಾಮ ಶೆಟ್ಟಿ ಸಿತ್ಲ, ಶಶಿಧರ ಶೆಟ್ಟಿ ಕೆರಮ, ಕಟೀಲು ರಾಮ ಸೇನಾ ಅಧ್ಯಕ್ಷ ಸೂರಜ್ ಕೊಂಡೇಲ, ಕಿರಣ್‍ಶೆಟ್ಟಿ ಹೊಸಮನೆ, ಚಂದ್ರಕಾಂತ ನಾಯಕ್, ಸಂಜೀವ ಮಡಿವಾಳ, ಸೂರಜ್ ಶೆಟ್ಟಿ ಕೊಡೆತ್ತೂರು, ರಾಜೇಶ್ ಶೆಟ್ಟಿ ಕೆಳಗಿನ ಮನೆ, ಆನಂದ ಶೆಟ್ಟಿ ಪುಣ್ಕೆದಡಿ, ಶ್ರೀನಿವಾಸ ಶೆಟ್ಟಿ ಕೊಡೆತ್ತೂರು, ಸಂಜೀತ್ ಶೆಟ್ಟಿ ಮುಡು ದೇವಶ್ಯ, ಕಟೀಲು ರಾಮ ಸೇನಾ ಘಟಕದ ಸದಸ್ಯರುಉ, ಸತೀಶ್ ಕೊಂಡೇಲ, ದೀಪಕ್ ಕಟೀಲು, ಚಂದ್ರಶೇಖರ ಶೆಟ್ಟಿ ಬಾಳಿಕೆ ಮನೆ ಮತ್ತು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

ಪತ್ರಿಕೆಗಳ ಮೇಲೆ ಗ್ರಾಮಸ್ಥರ ಅಸಮಾಧಾನ:
ಜಗತ್ಪ್ರಸಿದ್ಧವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಆಡಳಿತ ವೈಫಲ್ಯ ಮತ್ತು ಅರ್ಚಕರ ಭ್ರಷ್ಟಾಚಾರದ ಬಗ್ಗೆ ಪುರಾವೆ ಸಮೇತವಾಗಿ ನಡೆದ ಸಭೆಯ ಬಗ್ಗೆ ಯಾವುದೇ ಪತ್ರಿಕೆಗಳು ವರದಿ ಮಾಡದೇ ಇರುವ ಬಗ್ಗೆ ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ತೀವ್ರವಾದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಾಟ್ಸಾಫ್ ಮೂಲಕ ಸಂದೇಶವನ್ನು ರವಾನೆ ಮಾಡಿರುವ ಗ್ರಾಮಸ್ಥರು ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಪಾಲಿಸಬೇಕು ಎಂಬ ಕಿವಿಮಾತು ಹೇಳಿದ್ದಾರೆ. ಜಯಕಿರಣ' ಪತ್ರಿಕೆಯು ಕಟೀಲು ದೇವಳದಲ್ಲಿ ನಡೆಯುತ್ತಿರುವು ಒಳ್ಳೆಯ ಕೆಲಸ ಕಾರ್ಯಗಳನ್ನು ಮುಕ್ತವಾಗಿ ಪ್ರಶಂಶಿಸಿ ವರದಿಗಳನ್ನು ಪ್ರಕಟಿಸಿವೆ. ಅದೇ ರೀತಿ ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಪುರಾವೆ ಸಹಿತ ಪ್ರಕಟಿಸಿ ಉಗ್ರವಾಗಿ ಖಂಡಿಸಿದೆ. ಇನ್ನು ಮುಂದೆಯೂ ಅವ್ಯವಸ್ಥೆಗಳನ್ನು ತಿದ್ದುವ ಮತ್ತು ಉತ್ತಮ ಕಾರ್ಯಗಳನ್ನು ಪ್ರಶಂಸಿಸುವ ವರದಿಗಳನ್ನು ನಿರ್ಭೀತಿಯಿಂದಜಯಕಿರಣ’ ಪ್ರಕಟಿಸಲಿದೆ.

Leave a Reply

Your email address will not be published. Required fields are marked *