ಐಪಿಎಲ್‌ನಿಂದ ಕೇನ್ ಔಟ್: ಝಾಂಪಾ ಸೇರ್ಪಡೆ

ದುಬೈ: ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ. ತಂಡದ ಪ್ರಮುಖ ಬೌಲರ್ ಆಗಿದ್ದ ಕೇನ್ ರಿಚರ್ಡ್ಸ್‌ಸನ್ ತಂಡದಿಂದ ಹೊರಬಿದ್ದಿದ್ದು, ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆ್ಯಡಂ ಝಾಂಪಾ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪಂದ್ಯಾವಳಿಯ ಆರಂಭಕ್ಕೆ ಇನ್ನು ಮೂರು ವಾರಗಳಿಗೂ ಕಡಿಮೆ ಅವಧಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಆರ್‌ಸಿಬಿ ತಂಡದ ಭಾಗವಾಗಿದ್ದರು. ಆದರೆ ಅವರು ಈ ಬಾರಿ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂದ್ದಾರೆ. ಈ ಕಾರಣದಿಂದಾಗಿ ಆಸ್ಟ್ರೇಲಿಯಾ ಮೂಲದವರೇ ಆದ ಸ್ಪಿನ್ನರ್‌ನನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಮೂಲಗಳ ಮಾಹಿತಿ ಪ್ರಕಾರ ಕೇನ್ ರಿಚರ್ಡ್ಸನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಟೂರ್ನಿಯನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ವೇಗಿಯ ಸ್ಥಾನಕ್ಕೆ ಸ್ಪಿನ್ನರ್ ಆಯ್ಕೆ ಮಾಡಿಕೊಂಡು ಆರ್‌ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿದೆ. ಆ್ಯಡಂ ಝಾಂಪಾ ಐಪಿಎಲ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 6 ವಿಕೆಟ್ ಪಡೆದ ಏಕೈಕ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಝಾಂಪಾ ಅವರಿಗಿದೆ. 28 ವರ್ಷದ ಝಾಂಪಾ 2016-2017ರಲ್ಲಿ ರೈಸಿಂಗ್ ಪುಣೆ ಸುಪರ್ ಜೇಂಟ್ಸ್ ತಂಡದ ಭಾಗವಾಗಿದ್ದರು. 11 ಪಂದ್ಯಗಳಿಂದ 19 ವಿಕೆಟ್ ಪಡೆದು ದಾಖಲೆಯನ್ನು ಬರೆದಿದ್ದಾರೆ ಮಿಂಚಿದ್ದಾರೆ. ಆದರೂ ಈ ಬಾರಿಯ ಐಪಿಎಲ್ ಟೂರ್ನಿಗಾಗಿ ನಡೆದ ಹರಾಜಿನಲ್ಲಿ ಯಾವುದೇ ತಂಡದ ಪಾಲಾಗದೆ ಉಳಿದುಕೊಂಡಿದ್ದರು. ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ನವೆಂಬರ್ 10ರಂದು ಆಯೋಜನೆಯಾಗಲಿದೆ. ಆದರೆ ಪಂದ್ಯದ ಅಂತಿಮ ವೇಳಾಪಟ್ಟಿ ಇನ್ನು ಕೂಡ ಪ್ರಕಟವಾಗದೆ ಉಳಿದುಕೊಂಡಿದೆ. ಕೊರೊನಾ ವೈರಸ್‌ನಿಂದಾಗಿ ಅಬುದಾಬಿ-ದುಬೈ ಪ್ರಯಾಣದಲ್ಲಿ ನಿರ್ಬಂಧ ಹಾಗೂ ಸಿಎಸ್‌ಕೆ ಪಾಳಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಐಪಿಎಲ್ ವೇಳಾಪಟ್ಟಿ ಮತ್ತಷ್ಟು ತಡವಾಗಲು ಕಾರಣವಾಗಿದೆ.