ಅಪರೂಪದ ದಾಖಲೆ ನಿರ್ಮಿಸಿದ ರೊನಾಲ್ಡೊ

ಸ್ಟಾಕ್ಹೋಮ್: ಪೋರ್ಚುಗಲ್ ಫುಟ್ಬಾಲ್‌ ಸ್ಟಾರ್, ವಿಶ್ವದ ಪ್ರಸಿದ್ದ ಕ್ರೀಡಾಳುಗಳಲ್ಲಿ ಒಬ್ಬರಾಗಿರುವ ಕ್ರಿಸ್ಚಿಯಾನೊ ರೊನಾಲ್ಡೋ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ೧೦೦ಕ್ಕೂ ಗೋಲ್ ಬಾರಿಸಿದ ವಿಶ್ವದ ಎರಡನೇ ಆಟಗಾರನಾಗಿ ರೊನಾಲ್ಡೋ ಗುರುತಿಸಿಕೊಂಡಿದ್ದಾರೆ.
ಯುಇಎಫ್‌ಎ ನೇಷನ್ಸ್ ಲೀಗ್‌ನಲ್ಲಿ ರೊನಾಲ್ಡೋ ಈ ಸಾಧನೆ ತೋರಿದ್ದಾರೆ. ಮಂಗಳವಾರ ನಡೆದ ಯುಇಎಫ್‌ಎ ನೇಷನ್ಸ್ ಲೀಗ್‌ನಲ್ಲಿ ಸ್ವೀಡನ್ ವಿರುದ್ಧ ಪೋರ್ಚುಗಲ್ 2-೦ ಅಂತರದಲ್ಲಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಪೋರ್ಚುಗಲ್ ಪರ ಕ್ರಿಸ್ಚಿಯಾನೊ ರೊನಾಲ್ಡೋ (45, 72ನೇ ನಿಮಿಷದಲ್ಲಿ) ಎರಡು ಗೋಲುಗಳನ್ನು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. 35ರ ಹರೆಯದ ಯುವೆಂಟಸ್ ಆಟಗಾರ ರೊನಾಲ್ಡೋ 100+ ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ವಿಶ್ವದ 2ನೇ ಆಟಗಾರನಾಗಿ, 100+ ಗೋಲ್ ಬಾರಿಸಿದ ಯುರೋಪ್‌ನ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 165 ಪಂದ್ಯಗಳಲ್ಲಿ ರೊನಾಲ್ಡೋ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. 100+ ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ಮೊದಲ ಆಟಗಾರನೆಂಬ ಹಿರಿಮೆ ಇರಾನ್‌ನ ಅಲಿ ಡೇಯಿ ಅವರಿಗೆ ಸಲ್ಲುತ್ತದೆ. ಅಲಿ ಒಟ್ಟು 109 ಅಂತಾರಾಷ್ಟ್ರೀಯ ಗೋಲುಗಳ ದಾಖಲೆ ಹೊಂದಿದ್ದಾರೆ. ರೊನಾಲ್ಡೋ ಖಾತೆಯಲ್ಲಿ ಈವರೆಗೆ ಒಟ್ಟು 101 ಗೋಲುಗಳು ಸೇರಿವೆ.

Leave a Reply

Your email address will not be published. Required fields are marked *