ಅಂತಿಮ ಟಿ-ಟ್ವೆಂಟಿ: ಆಸೀಸ್‌ಗೆ ಜಯ ೨-೧ರ ಅಂತರದಲ್ಲಿ ಆಂಗ್ಲರಿಗೆ ಪ್ರಶಸ್ತಿ

ಸೌಥಂಪ್ಟನ್‌: ಇಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು ೧-೨ಕ್ಕೆ ತಗ್ಗಿಸಿದೆ. ಅತ್ತ ಸೋಲಿನ ಹೊರತಾಗಿಯೇ ಸರಣಿಯನ್ನು ಆಂಗ್ಲಪಡೆ ೨-೧ರ ಅಂತರದಲ್ಲಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ ೧೪೫ ರನ್‌ ಪೇರಿಸಿತು. ಆಂಗ್ಲ ಪರ ಆರಂಭಿಕನಾಗಿ ಭಡ್ತಿ ಪಡೆದಿದ್ದ ಟಾಮ್‌ ಬ್ಯಾಂಟನ್‌ (೨) ವಿಫಲತೆ ಕಂಡರೆ ಡೇವಿಡ್‌ ಮಲಾನ್‌ (೨೧) ಹಾಗೂ ಸ್ಯಾಮ್‌ ಬಿಲ್ಲಿಂಗ್‌ (೪) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಬೈರ್‌ಸ್ಟೋ (೫೫) ಅರ್ಧಶತಕ ದಾಖಲಿಸುವ ಮೂಲಕ ಏಕಾಂಗಿಯಾಗಿ ತಂಡಕ್ಕೆ ಆಸರೆಯಾದರು. ಬೈರ್‌ಸ್ಟೋ ತನ್ನ ಇನ್ನಿಂಗ್ಸ್‌ನಲ್ಲಿ ತಲಾ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸಿಡಿಸಿದ್ದರು. ಅಂತಿಮ ಹಂತದಲ್ಲಿ ಜೋ ಡೆನ್ಸಿ ೧೯ ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ ಅಜೇಯ ೨೯ ರನ್‌ ದಾಖಲಿಸಿದ ಪರಿಣಾಮ ತಂಡ ೧೫೦ರ ಗಡಿ ಸಮೀಪಿಸಿತು. ಆಸೀಸ್‌ ಪರ ಆಡಮ್‌ ಝಾಂಪಾ ಎರಡು ವಿಕೆಟ್‌ ಪಡೆದರು.
ಗುರಿ ಬೆನ್ನತ್ತಿದ ಆಸೀಸ್‌ ಪರ ಮ್ಯಾಥ್ಯೂ ವೇಡ್‌ (೧೪) ೧೧ರ ಬಳಗದಲ್ಲಿ ಅವಕಾಶ ಪಡೆದರೂ ವಿಫಲತೆ ಕಂಡರು. ಆದರೆ ನಾಯಕ ಆರೊನ್‌ ಫಿಂಚ್‌ (೩೯) ಹಾಗೂ ಸ್ಟೊಯ್ನಿಸ್‌ (೨೬) ಉತ್ತಮ ಬ್ಯಾಟಿಂಗ್‌ ನಿರ್ವಹಣೆ ತೋರಿದರು. ಅಲ್ಲದೆ ಅಂತಿಮ ಹಂತದಲ್ಲಿ ಮಿಚೆಲ್‌ ಮಾರ್ಶ್‌ (ಅಜೇಯ ೩೯) ಹಾಗೂ ಆಗರ್ (ಅಜೇಯ ೧೬) ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಅಂತಿಮವಾಗಿ ತಂಡ ೧೯.೩ ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ ೧೪೬ ರನ್‌ ಗಳಿಸಿ ಜಯ ಸಾಧಿಸಿತು. ಆಂಗ್ಲ ಪರ ಆದಿಲ್‌ ರಶೀದ್‌ ಎರಡು ವಿಕೆಟ್‌ ಪಡೆದರು. ಇನ್ನು ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಮಿಚೆಲ್‌ ಮಾರ್ಶ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ ಜೋಸ್‌ ಬಟ್ಲರ್‌ ಸರಣಿಶ್ರೇಷ್ಠರಾಗಿ ಆಯ್ಕೆಯಾದರು.

Leave a Reply

Your email address will not be published. Required fields are marked *