ʻನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದುʼ

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ನಿವೃತ್ತಿಯ ನಂತರ ಮುಕ್ತ ಮನೋಭಾವದಿಂದ ಹಲವಾರು ಭಾರಿ ಭಾರತೀಯ ಕ್ರಿಕೆಟಿಗರನ್ನು ಹೊಗಳಿ ಮಾತುಗಳನ್ನಾಡಿದ್ದಾರೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಶೋಯೆಬ್ ಅಖ್ತರ್ ಸಾಕಷ್ಟು ಸಂದರ್ಭದಲ್ಲಿ ಸಕಾರಾತ್ಮಕವಾಗಿ ಪ್ರಸ್ತಾಪಿಸಿದ್ದಾರೆ. ಆದರೆ ಈ ಕಾರಣಕ್ಕಾಗಿ ಶೋಯೆಬ್ ಅಖ್ತರ್ ಪಾಕಿಸ್ತಾನೀಯರಿಂದ ಟೀಕೆಗೂ ಗುರಿಯಾಗಿದ್ದಾರೆ. ಈ ಟೀಕಾಕಾರರಿಗೆ ಶೋಯೆಬ್ ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನು ನೀಡಿದ್ದು, ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು ಎಂದು ಟೀಕಾಕಾರರಿಗೆ ಎದಿರೇಟು ನೀಡಿದ್ದಾರೆ.
ಅಲ್ಲದೆ ಅಖ್ತರ್‌ ತನ್ನ ವಿರುದ್ಧ ಬಂದ ಟೀಕೆಗಳಿಗೆ ಮರುಪ್ರಶ್ನೆಯನ್ನು ಹಾಕಿದ್ದಾರೆ. ನಾನು ಯಾವ ಕಾರಣಕ್ಕಾಗಿ ಭಾರತೀಯ ಕ್ರಿಕೆಟಿಗರನ್ನು ಟೀಕಿಸಲಿ. ಪ್ರಸಕ್ತ ಕಾಲದಲ್ಲಿ ಅವರು ವಿಶ್ವ ಕ್ರಿಕೆಟ್‌ಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿರುವಾಗ ಟೀಕಿಸಲು ಕಾರಣವೇನಿದೆ? ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಬಗ್ಗೆ ನಿರಂತರವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪಾಕಿಸ್ತಾನದ ಆಟಗಾರರನ್ನು ಭಾರತಿಯ ಕ್ರಿಕೆಟಿಗರಿಗೆ ಹೋಲಿಕೆಯನ್ನು ಮಾಡಿತ್ತಾ ಪಾಕ್ ಆಟಗಾರರನ್ನು ನಿರಂತರ ಟೀಕೆ ಮಾಡುತ್ತಾ ಬಂದಿದ್ದಾರೆ. ಅಖ್ತರ್ ಅವರ ಈ ರೀತಿಯ ಮಾತುಗಳಿಗೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಟೀಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನು ಹೇಗೆ ವಿರಾಟ್ ಕೊಹ್ಲಿಯನ್ನು ಪ್ರಶಂಸೆ ಮಾಡದೆ ಇರಲಿ? ಕೊಹ್ಲಿ ಆಟದ ಸಮೀಪಕ್ಕೆ ಬರುವ ಯಾರಾದರೂ ಆಟಗಾರ ವಿಶ್ವ ಕ್ರಿಕೆಟ್‌ನಲ್ಲೇ ಯಾರಾದರೂ ಇದ್ದಾರಾ? ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಹಿಂದಿನ ವೈಭವದ ದಿನಗಳ ಬಗ್ಗೆಯೂ ಅಖ್ತರ್ ಮಾತನಾಡಿದ್ದಾರೆ. “ಒಂದು ಕಾಲವಿತ್ತು, ಆಗ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ನೋಡಿ ಪಾಕ್ ಕ್ರಿಕೆಟಿಗರಂತೆ ಆಗಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬಿನ್ನವಾಗಿದೆ ಎಂದಿದ್ದಾರೆ. ಕೊಹ್ಲಿಯ ಸಾಮರ್ಥ್ಯದ ಬಗ್ಗೆ ಸಂಶಯವಿದ್ದರೆ ಆತನ ಅಂಕಿಅಂಶದತ್ತ ಗಮನಹರಿಸಲಿ ಎಂದಿದ್ದಾರೆ ಅಖ್ತರ್. ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 27 ಶತಕಗಳೊಂದಿಗೆ 7240 ರನ್ ಗಳಿಸಿದ್ದಾರೆ. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ 248 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 43 ಶತಕಗಳೊಂದಿಗೆ 11867 ಎನ್‌ಗಳನ್ನು ಬಾರಿಸಿದ್ದಾರೆ. ಟೀಕಾಕಾರರಿಗೆ ಮತ್ತಷ್ಟು ಪ್ರಶ್ನೆ ವಿರಾಟ್ ಕೊಹ್ಲಿ 70 ಶತಕಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಬೇರೆ ಯಾವ ಆಟಗಾರ ಸದ್ಯಕ್ಕೆ ಈ ಸಾಧನೆಯನ್ನು ಮಾಡಿದ್ದಾರೆ? ಭಾರತಕ್ಕಾಗಿ ಎಷ್ಟು ಸರಣಿಗಳನ್ನು ವಿರಾಟ್ ಕೊಹ್ಲಿ ಗೆದ್ದು ಕೊಟ್ಟಿದ್ದಾರೆ? ಆತನನ್ನು ನಾನು ಪ್ರಶಂಸಿಸಬಾರದಾ ಎಂದು ಶೋಯೆಬ್ ಅಖ್ತರ್ ಟೀಕಾಕಾರಿಗೆ ಮರು ಪ್ರಶ್ನೆಗಳನ್ನು ಹಾಕಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರತೀ ಬಾರಿಯೂ ಅದ್ಭುತ ಆಟಗಳನ್ನು ಆಡುತ್ತಾರೆ ಎಂದು ಶೋಯೆಬ್ ಅಖ್ತರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *