ಹಿರೇಮಗಳೂರು: ಭಾರೀ ಮಳೆಗೆ ಕುಸಿದ ಮನೆ

ಚಿಕ್ಕಮಗಳೂರು: ನಿರಂತರ ಸುರಿಯುತ್ತಿರುವ ಮಳೆಯಿಂದ ಹಿರೇಮಗಳೂರಿನ ಲಿಂಗಾಯಿತರ ಬೀದಿಯ ಮೂಲೆಮನೆ ಹಟ್ಟಿಯಲ್ಲಿರುವ ಲಕ್ಷ್ಮಣ ಅವರ ವಾಸ್ತವ್ಯದ ಮನೆಯ ಗೋಡೆ ಇಂದು ಕುಸಿದು ಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ತಾಲೂಕು ಕಚೇರಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರವಷ್ಟೇ ಲಕ್ಷ್ಮಣ ಅವರ ಪತ್ನಿ ಲಕ್ಷ್ಮಮ್ಮ ನಿಧನರಾಗಿದ್ದು, ಮನೆಯ ಗೋಡೆ ಪೂರ್ಣ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷ್ಮಣ ಮತ್ತು ಅವರ ಪುತ್ರಿ, ಪುತ್ರ ಬೀದಿಗೆ ಬಿದ್ದಿದ್ದಾರೆ. ಆಶ್ರಯ ಕಳೆದುಕೊಂಡಿರುವ ಲಕ್ಷ್ಮಣ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.