ಸ್ನೇಹಿತೆಯ ನಿಶ್ಚಿತಾರ್ಥದಂದು ಒಡವೆ ಕದ್ದು ಸಿಕ್ಕಿಬಿದ್ದಳು!

ಮೈಸೂರು: ತನ್ನ ಸ್ನೇಹಿತೆಯ ನಿಶ್ಚಿತಾರ್ಥ ಸಮಾರಂಭಕ್ಕೆ ತೆರಳಿದ್ದ ಯುವತಿಯೋರ್ವಳು ಲಕ್ಷಾಂತರ ರೂ. ಮೌಲ್ಯದ ಬಂಗಾರದ ಒಡವೆಗಳನ್ನು ಕದ್ದು ಪೊಲೀಸ್ ವಶವಾದ ಘಟನೆ ನಡೆದಿದೆ. ನಗರದ ಕುಂಬಾರಕೊಪ್ಪಲಿನ ಸುಭಾಷ್ ನಗರ ನಿವಾಸಿ ರಮೇಶ್ ಎಂಬವವರ ಮನೆಯಲ್ಲಿ ಕಳೆದ 23ರಂದು ಮಗಳ ನಿಶ್ಚಿತಾರ್ಥ ಸಮಾರಂಭ ಏರ್ಪಡಿಸಲಾಗಿತ್ತು. ಮಗಳು ಧರಿಸಿದ್ದ ಆಭರಣಗಳನ್ನು ಸಮಾರಂಭ ಮುಗಿದ ನಂತರ ಬಿಚ್ಚಿ ಅಲ್ಮೇರಾದಲ್ಲಿ ಇಟ್ಟಿದ್ದರು. ಅದರೆ ಅದೇ ದಿವಸ ಸಂಜೆ ನೆಂಟರೆಲ್ಲಾ ಮನೆಯಿಂದ ಹೋದ ಮೇಲೆ ಅಲ್ಮೇರಾದಲ್ಲಿದ್ದ ಒಡವೆಗಳನ್ನು ನೋಡಿದಾಗ ನಾಪತ್ತೆ ಆಗಿತ್ತು. ಈ ಕುರಿತು ಮೇಟಗಳ್ಳಿ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಂಶಯದ ಮೇರೆಗೆ ಸಮಾರಂಭಕ್ಕೆ ಮನೆಗೆ ಬಂದಿದ್ದ ಮಗಳ ಸ್ನೇಹಿತೆ ಅಶ್ರಿತಾ(21) ಎಂಬಾಕೆಯನ್ನು ವಿಚಾರಣೆಗೊಳಪಡಿಸಿದಾಗ ಒಡವೆಗಳನ್ನು ಕದ್ದು ತನ್ನ ಮನೆಯಲ್ಲಿ ಬಚ್ಚಿಟ್ಟುಕೊಂಡಿರುವುದಾಗಿ ಒಪ್ಪಿಕೊಂಡಳು. ಆಕೆಯನ್ನು ಬಂಧಿಸಿ 4,15,000 ರೂ. ಬೆಲೆಬಾಳುವ 85 ಗ್ರಾಂ. ತೂಕದ ಎರಡು ನೆಕ್ಲೇಸ್ ಮತ್ತು ಒಂದು ಜೊತೆ ಓಲೆಯನ್ನು ವಶಪಡಿಸಿಕೊಂಡ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.