ಸೈಂಟ್‌ ಕೀಟ್ಸ್‌ಗೆ ಸೋಲುಣಿಸಿದ ಬಾರ್ಬೆಡೊಸ್‌

ತರೌಬಾ: ಜೇಸನ್‌ ಹೋಲ್ಡರ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ರ ಜವಾಬ್ದಾರಿಯುತ ಆಟದ ನೆರವಿನಿಂದ ಇಲ್ಲಿ ಸೈಂಟ್ಸ್‌ ಕೀಟ್ಸ್‌ ಹಾಗೂ ನೆವಿಸ್‌ ಪ್ಯಾಟ್ರಿಯಾಟ್ಸ್‌ ವಿರುದ್ಧದ ಸಿಪಿಎಲ್‌ನ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬಾರ್ಬೆಡೊಸ್‌ ಟ್ರೈಂಡೆನ್ಸ್‌ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಬಾರ್ಬೆಡೊಸ್‌ ವಿಫಲ ಆರಂಭ ಪಡೆಯಿತು. ಜೊನಾಥನ್‌ ಚಾರ್ಲ್ಸ್‌ (೪), ಶಾಯ್‌ ಹೋಪ್ (೩) ಹಾಗೂ ಕೋರಿ ಆಂಡರ್ಸನ್‌ (೦) ವಿಫಲತೆ ಕಂಡರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಾಯ್ಲ್‌ ಮೇಯರ್ಸ್‌ (೩೭) ಹಾಗೂ ಜೇಸನ್‌ ಹೋಲ್ಡರ್‌ (೩೮) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಸ್ಯಾಂಟ್ನರ್‌ (೨೦) ಹಾಗೂ ರಶೀದ್‌ ಖಾನ್‌ (೨೬) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ನಷ್ಟಕ್ಕೆ ೧೫೩ ರನ್‌ ಗಳಿಸಿತು. ಸೈಂಟ್‌ ಕೀಟ್ಸ್‌ ಪರ ತನ್ವೀರ್‌, ಕಾಟ್ರೆಲ್‌ ಹಾಗೂ ಎಮ್ರಿತ್‌ ತಲಾ ಎರಡು ವಿಕೆಟ್‌ ಪಡೆದರು.

ಗುರಿ ಬೆನ್ನತ್ತಿದ ಸೈಂಟ್‌ ಕೀಟ್ಸ್‌ ಉತ್ತಮ ಜೊತೆಯಾಟ ನಡೆಸಿದರೂ ನಿಧಾನಗತಿಯ ಆಟಕ್ಕೆ ಮೊರೆ ಹೋಗಿದ್ದು, ತಂಡದ ವಿಫಲತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಜೋಶುವಾ ಡಿಸಿಲ್ವಾ ೪೧ ರನ್‌ ಗಳಿಸಿದರೂ ಅದಕ್ಕೆ ಅಷ್ಟೇ ಸಂಖ್ಯೆಯ ಎಸೆತಗಳನ್ನು ಬಳಸಿಕೊಂಡರು. ಆದರೆ ಬೆನ್‌ ಡಂಕ್‌ (೩೪) ಹಾಗೂ ಕೆಲಕ್ರಮಾಂಕದಲ್ಲಿ ತನ್ವೀರ್‌ (೧೬) ಹೋರಾಟ ನಡೆಸಿದರೂ ತಂಡ ಗೆಲುವು ಸಾಧಿಸಲಿಲ್ಲ. ಪರಿಣಾಮ ತಂಡ ನಿಗದಿತ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೧೪೭ ರನ್‌ ಗಳಿಸಲಷ್ಟೇ ಶಕ್ತವಾಯಿತು. ಬಾರ್ಬೆಡೊಸ್‌ ಪರ ಸ್ಯಾಂಟ್ನರ್‌ ಹಾಗೂ ರಶೀದ್‌ ತಲಾ ಎರಡು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *