ಸೆಂಟ್ರಲ್ ಮಾರ್ಕೆಟ್ ನಲ್ಲಿ ಬಿಗುವಿನ ವಾತಾವರಣ! ವರ್ತಕರಿಗೆ ಖಾದರ್ ಬೆಂಬಲ!!

ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಅನ್ನು ನಾಳೆಯಿಂದ ಬಂದ್ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ಇದರ ವಿರುದ್ಧ ವರ್ತಕರು ತಿರುಗಿಬಿದ್ದಿದ್ದಾರೆ. ಇಂದು ಸಂಜೆ ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಜಮಾಯಿಸಿದ ನೂರಾರು ಸಂಖ್ಯೆಯ ವರ್ತಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವರ್ತಕರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಸೆಂಟ್ರಲ್ ಮಾರ್ಕೆಟ್ ಅನ್ನು ನಾಳೆಯಿಂದ ಮತ್ತೆ ಬಂದ್ ಮಾಡುವ ಜಿಲ್ಲಾಡಳಿತದ ನಿರ್ಧಾರ ಸರಿಯಲ್ಲ ಎಂದು ಖಾದರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ವರ್ತಕರು ನಾಳೆ ಮತ್ತೆ ಸೆಂಟ್ರಲ್ ಮಾರ್ಕೆಟ್ ನಲ್ಲೇ ವ್ಯಾಪಾರ ನಡೆಸಲು ಮುಂದಾಗಿದ್ದು ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

