`ಸುಶಾಂತ್‌ಗೆ ನ್ಯಾಯ ದೊರಕಿಸಿ ಕೊಡಿ’ ಮೋದಿಗೆ ಪತ್ರ ಬರೆದ ಶ್ವೇತಾ ಸಿಂಗ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ತನ್ನ ಸಹೋದರನಿಗೆ ನ್ಯಾಯ ದೊರಕಿಸಿ ಕೊಡುವಂತೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಡಿಯರ್ ಸರ್, ನೀವು ಸತ್ಯದ ಪರವಾಗಿ ನಿಲ್ಲುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾವು ತುಂಬ ಸರಳ ಕುಟುಂಬದವರು. ನನ್ನ ತಮ್ಮ ಬಾಲಿವುಡ್‍ಗೆ ಬಂದಾಗ ಅವನಿಗೆ ಯಾವುದೇ ಗಾಡ್‍ಫಾದರ್ ಇರಲಿಲ್ಲ. ಈಗಲೂ ಇಲ್ಲ. ಹೀಗಾಗಿ ನೀವು ಕೂಡಲೇ ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೀನಿ. ಎಲ್ಲ ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯುತ್ತಿದಿಯೇ ಎಂದು ಪರಿಶೀಲನೆ ಮಾಡಿ. ಯಾವುದೇ ಸಾಕ್ಷಿ ನಾಶ ಆಗಲು ಅವಕಾಶ ಕೊಡಬೇಡಿ. ಸತ್ಯಕ್ಕೆ ಜಯವಾಗಲಿ” ಎಂದು ಶ್ವೇತಾ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಈ ಪತ್ರವನ್ನು ಟ್ವಿಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ನಾನು ಸುಶಾಂತ್ ಸಿಂಗ್ ರಜಪೂತ್ ಸಹೋದರಿ. ಈ ಪ್ರಕರಣದ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನಾವು ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇಟ್ಟುಕೊಂಡಿದ್ದೇನೆ” ಎಂದು ಶ್ವೇತಾ ಅವರು ಬರೆದುಕೊಂಡಿದ್ದಾರೆ. ಜೊತೆಗೆ ಜಸ್ಟಿಸ್ ಫಾರ್ ಸುಶಾಂತ್# ಸತ್ಯ ಮೇವ ಜಯತೆ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.