ಸೀಫುಡ್ ನಲ್ಲೂ ಕೊರೊನಾ ವೈರಸ್!

ಬೀಜಿಂಗ್: ಕೋಲ್ಡ್ ಸ್ಟೋರೇಜ್ ಮಾಡಲಾದ ಸೀಫುಡ್ ಪ್ಯಾಕೆಟ್‍ಗಳಲ್ಲಿಯೂ ಕೊರೊನಾ ವೈರಸ್ ಅನ್ನು ಚೀನಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಚೀನಾದ ಬಂದರು ನಗರ ದಾಲಿಯಾನ್‍ನಿಂದ ಆಮದು ಮಾಡಿಕೊಳ್ಳಲಾದ ಫ್ರೋಜನ್ ಸೀಫುಡ್‍ನ ಪ್ಯಾಕೆಟ್‍ಗಳಲ್ಲಿ ವೈರಸ್ ಪತ್ತೆಯಾಗಿರುವುದನ್ನು ಸ್ಥಳೀಯ ಸರ್ಕಾರ ದೃಢಪಡಿಸಿದೆ. ಪೂರ್ವ ಶಾಂಡೊಂಗ್ ಪ್ರಾಂತ್ಯದ ನಗರ ಯಾಂಟೈನಲ್ಲಿರುವ ಮೂರು ಕಂಪೆನಿಗಳು ಖರೀಸಿದ ಶೀತಲೀಕರಿಸಿದ ಸೀಫುಡ್ ಪ್ಯಾಕೆಟ್‍ನ ಹೊರಭಾಗದಲ್ಲಿ ವೈರಸ್ ಕಂಡುಬಂದಿದೆ. ದಾಲಿಯಾನ್‍ಗೆ ಬಂದಿಳಿದ ಸೀಫುಡ್‍ಅನ್ನು ಹಡಗಿನಲ್ಲಿ ತರಿಸಿಕೊಳ್ಳಲಾಗಿತ್ತು ಎಂದು ಯಾಂಟೈ ನಗರ ಸರ್ಕಾರ ತಿಳಿಸಿದೆ.
ಸಮುದ್ರ ಖಾದ್ಯಗಳ ಪ್ಯಾಕೇಟ್‍ನಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವುದು ಇದು ಎರಡನೇ ಬಾರಿ. ಕಳೆದ ಜುಲೈ ತಿಂಗಳಲ್ಲಿ ಈಕ್ವೆಡಾರ್‍ನಿಂದ ಆಮದು ಮಾಡಿಕೊಂಡಿದ್ದ ಸಿಗಡಿಯ ಪ್ಯಾಕೆಟ್‍ಗಳ ಮೇಲೆ ಕೊರೊನಾ ವೈರಸ್ ಇರುವುದನ್ನು ಪತ್ತೆಹಚ್ಚಿದ್ದರು. ಇದರ ಬಳಿಕ ಈಕ್ವೆಡಾರ್‍ನ ಮೂರು ಮುಖ್ಯ ಸೀಗಡಿ ಉತ್ಪಾದಕ ಕಂಪೆನಿಗಳಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿತ್ತು. ಸಮುದ್ರ ಆಹಾರ ಖಾದ್ಯಗಳು ಹಾಗೂ ವನ್ಯಜೀವಿ ಆಹಾರಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಿಂದಲೇ ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಹರಡಿದೆ ಎನ್ನಲಾಗಿದೆ.