ಸಿಪಿಎಲ್‌: ಕೊರೊನಾ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ಪಾಸ್‌

ಜಮೈಕಾ: ವಿಶ್ವದ ಪ್ರಖ್ಯಾತ ಕ್ರಿಕೆಟ್‌ ಟೂರ್ನಿಗಳಲ್ಲಿ ಒಂದಾಗಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್)ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು ಕೂಡ ಟ್ರಿನಿಡಾಡ್‌ಗೆ ಬಂದಿಳಿದ್ದು, ಆಟಗಾರರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಎಲ್ಲಾ ಆಟಗಾರರ ವರದಿ ನೆಗೆಟಿವ್‌ ಬಂದಿದೆ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಂಡು ಟೂರ್ನಿಯನ್ನು ನಡೆಸಲಾಗುತ್ತಿದೆ. ಆಟಗಾರರು ಕೆರೆಬಿಯನ್ ನಾಡಿಗೆ ಪ್ರವಾಸ ಕೈಗೊಳ್ಳುವ 72 ಗಂಟೆಗಳ ಮುನ್ನ ಕೊವಿಡ್ ಪರೀಕ್ಷೆಯನ್ನು ನಡೆಸಿ ವರದಿ ನೆಗೆಟಿವ್ ಬಂದ ಬಳಿಕವೇ ಆಟಗಾರರಿಗೆ ಪ್ರವಾಸಕ್ಕೆ ಅನುಮತಿಯನ್ನು ನೀಡಲಾಗಿತ್ತು. ಪರೀಕ್ಷೆಯ ಸಂದರ್ಭದಲ್ಲಿ ಓರ್ವ ಕ್ರಿಕೆಟಿಗನ ವರದಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದ್ದು ಆ ಆಟಗಾರ ಸೇರಿದಂತೆ ಆತನೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದ ಮತ್ತಿಬ್ಬರು ಕ್ರಿಕೆಟಿಗರು ಕೂಡ ಟೂರ್ನಿಯಿಂದ ಔಟ್ ಆಗಿದ್ದಾರೆ. ಅಲ್ಲದೆ ಓರ್ವ ಕೋಚ್ ವರದಿ ಕೂಡ ಪಾಸಿಟಿವ್ ಬಂದಿದ್ದು ಅವರಿಗೂ ಪಾಲ್ಗೊಳ್ಳುವ ಅವಕಾಶವಿಲ್ಲ. ಟ್ರೆನಿಡಾಡ್‌ಗೆ ಆಗಮಿಸಿದ ಬಳಿಕವೂ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ವರದಿಯಲ್ಲಿ ಎಲ್ಲಾ ಆಟಗಾರರು ಕೂಡ ಕೊರೊನಾ ಮುಕ್ತರಾಗಿರುವುದು ಸಾಬೀತಾಗಿದೆ. ನಿಗದಿಪಡಿಸಿರುವ ಹೋಟೆಲ್‌ಗಳಲ್ಲಿ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸಿಪಿಎಲ್ ಕಾರ್ಯಾಚರಣಾ ನಿರ್ದೇಶಕರಾಗಿರುವ ಮೈಕಲ್ ಹಾಲ್ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಟಗಾರರ ಸುರಕ್ಷತೆ ಹಾಗೂ ಆರೋಗ್ಯ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಟ್ರಿನಿಡಾಡ್ ಮತ್ತು ಟೊಬಾಗೊಗೆ ಸೇರಿಸುವ ದೊಡ್ಡ ಪ್ರಯತ್ನ ಇದಾಗಿತ್ತು ಎಂದಿದ್ದಾರೆ. ವಿಶ್ವದ ಪ್ರಖ್ಯಾತ ಟಿ-ಟ್ವೆಂಟಿ ಲೀಗ್‌ಗಳಲ್ಲಿ ಒಂದಾಗಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ಗೆ ಈಗಾಗಲೇ ತಯಾರಿ ಅಂತಿಮ ಹಂತದಲ್ಲಿದೆ. ಆಗಸ್ಟ್‌ ೧೮ರಿಂದ ಆರಂಭವಾಗಲಿರುವ ಟೂರ್ನಿ ಸೆಪ್ಟೆಂಬರ್‌ ೨೦ರ ವರೆಗೆ ನಡೆಯಲಿದೆ.

Leave a Reply

Your email address will not be published. Required fields are marked *