ಸಾಕಿದ ಆನೆಯಿಂದಲೇ ಸಾವಿಗೀಡಾದ ಮಾವುತ!

ಮೈಸೂರು: ಮೈಸೂರು ಮೃಗಾಲಯದ ಅಭಿ ಹೆಸರಿನ 17 ವರ್ಷದ ಆನೆ ತನ್ನನ್ನು ಸಾಕಿ ಸಲಹಿದ್ದ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಲಲಿತಾದ್ರಿಪುರ ನಿವಾಸಿ ಮಾವುತ ಹರೀಶ್(38) ಸಾವಿಗೀಡಾದವರು. ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ನಿನ್ನೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು. ಪ್ರೀತಿಯಿಂದ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿ ಹಾಕಿದೆ.
ಇತರ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದರು ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಮೃತನ ಕುಟುಂಬಕ್ಕೆ ತಕ್ಷಣವೇ 10 ಲಕ್ಷ ಪರಿಹಾರ ಕೊಡಲಾಗುವುದು, ಆನೆ ಪರಿಹಾರ ಹಾಗೂ ವಿಮೆ ಸೇರಿ 5 ಲಕ್ಷದ ವರೆಗಿನ ಹಣ ಶೀಘ್ರ ತಲುಪಿಸುವಂತೆ ಕ್ರಮವಹಿಸಲಾಗುವುದು ಎಂದು ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದ್ದಾರೆ. ಹರೀಶ್ 18 ವರ್ಷಗಳಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ, ಇಲ್ಲೇ ಹುಟ್ಟಿ ಬೆಳೆದ ಆನೆಯನ್ನು ಆತನೇ ಸಾಕಿದ್ದ. ಆದರೆ ಅದೇ ಆನೆಯಿಂದ ಸಾವಿಗೀಡಾಗಿರುವುದು ದುರ್ವಿಧಿ ಎನ್ನಬಹುದು.

Leave a Reply

Your email address will not be published. Required fields are marked *