ಶೃಂಗೇರಿ ಜಲಾವೃತ, ಹೊರನಾಡು ಸಂಪರ್ಕ ಕಡಿತ!

ಚಿಕ್ಕಮಗಳೂರು: ಮಲೆನಾಡು ಪ್ರದೇಶದಲ್ಲಿ ಮುಂಗಾರುಮಳೆ ತನ್ನ ರುದ್ರ ನರ್ತನ ಮುಂದುವರೆಸಿದ್ದು, ತುಂಗಾನದಿ ಮೈದುಂಬಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ತುಂಗೆಯ ರಭಸಕ್ಕೆ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಶೃಂಗೇರಿ ಶಾರದಾ ಬೀದಿಯ ಅಕ್ಕಪಕ್ಕದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಕುರುಬರ ಕೇರಿ ಬಳಿಯೂ ನೀರು ನುಗ್ಗಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ತುಂಗಾ ನದಿ ಉಕ್ಕಿ ಹರಿಯುತ್ತಿದೆ.
ತುಂಗಾನದಿ ಪಕ್ಕದಲ್ಲಿರುವ ಮನೆಗಳಿಗೂ ಮಳೆ ನೀರು ನುಗ್ಗಿದೆ. ಮೂಡಿಗೆರೆ ತಾಲೂಕಿನ ಕಳಸ ಸಮೀಪದಲ್ಲಿನ ಚಿಕ್ಕನ ಕುಡಿಗೆ ಹಾಗೂ ಬಲಿಗೆ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಹೊರನಾಡು ಪಿಡಿಒ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳಸ-ಚಿಕ್ಕನಕುಡಿಗೆ ಹಾಗೂ ಬಲಿಗೆ-ಮೆಣಸಿನ ಹಾಡ್ಯ ಗ್ರಾಮದ ಸಂಪರ್ಕ ತಾತ್ಕಾಲಿಕ ಕಡಿತಗೊಳಿಸಲಾಗಿದೆ. ಶೃಂಗೇರಿ ಗುರು ನಿವಾಸಕ್ಕೆ ತೆರಳುವ ರಸ್ತೆ ಜಲಾವೃತವಾಗಿದೆ. ಭೋಜನ ಶಾಲೆಗೂ ನೀರು ನುಗ್ಗಿದ್ದು ಅಪಾಯದ ಮಟ್ಟದಲ್ಲಿ ತುಂಗಾನದಿ ಹರಿಯುತ್ತಿದೆ.
