ವಿಶ್ವದ ದುಬಾರಿ ಕಾರ್‌ ಖರೀದಿಸಿದ ರೊನಾಲ್ಡೊ

ಲಂಡನ್‌: ವಿಶ್ವ ಫುಟ್ಬಾಲ್‌ನ ಪ್ರಖ್ಯಾತ ಹಾಗೂ ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಪೋರ್ಚುಗಲ್‌ನ ರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಐಷಾರಾಮಿ ಕಾರುಗಳನ್ನು ಖರೀದಿಸುವುದು ಒಂದು ಹವ್ಯಾಸವಾಗಿದೆ. ಇದೀಗ ಅವರ ಸಂಗ್ರಹಕ್ಕೆ ಜಗತ್ತಿನ ಅತಿ ಹೆಚ್ಚು ದುಬಾರಿಯ ಕಾರ್ ಸೇರಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಕಾರ್ ಬುಗಾಟಿ ಲಾ ವೈಚೂರ್‌ ನೊಯ್‌ರೆ ಕಾರನ್ನು ಕೂಡ ಸದ್ಯ ರೊನಾಲ್ಡೊ ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ತನ್ನ ಫುಟ್ಬಾಲ್‌ ಕ್ಲಬ್ ಜುವೆಂಟಸ್ ಚಾಂಪಿಯನ್‌ಶಿಪ್ ಗೆಲ್ಲಲು ಸಹಾಯ ಮಾಡಿದ ರೊನಾಲ್ಡೊ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕಾರ್‌ನೊಂದಿಗೆ ಇರುವ ಫೋಟೊ ಹಂಚಿಕೊಂಡಿದ್ದಾರೆ. ವಿಶ್ವಾದ್ಯಂತ ಕೇವಲ 10 ಲಾ ವೈಚೂರ್‌ ನೊಯ್‌ರೆ ಕಾರ್‌ಗಳು ಮಾತ್ರ ಉತ್ಪಾದನೆಯಾಗಿದ್ದು, ಇದೀಗ ಹತ್ತು ಮಾಲಕರಲ್ಲಿ ರೊನಾಲ್ಡೊ ಕೂಡ ಒಬ್ಬರಾಗಿದ್ದಾರೆ. ಈ ಕಾರ್‌ನ ಅಂದಾಜು ಬೆಲೆ 75 ಕೋಟಿ ರುಪಾಯಿಯಾಗಿದೆ. ಈಗಾಗಲೇ ರೊನಾಲ್ಡೊ ಹಲವು ದುಬಾರಿ, ಐಷಾರಾಮಿ ಕಾರ್‌ಗಳನ್ನು ಹೊಂದಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಕಾರಿನ ಮಾಲಕರಾದ ರೊನಾಲ್ಡೊ ಗ್ಯಾರೇಜ್‌ನಲ್ಲಿರುವ ಕಾರುಗಳ ಒಟ್ಟು ಮೌಲ್ಯವು 30 ಮಿಲಿಯನ್ ಯುರೋಗಳಷ್ಟು (264 ಕೋಟಿ ರೂ. ಹೆಚ್ಚು) ಎಂದು ಅಂದಾಜಿಸಲಾಗಿದೆ. ಬುಗಾಟಿ ಲಾ ವೈಚೂರ್‌ ನೊಯ್‌ರೆ ಕಾರು ಗಂಟೆಗೆ 380 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, 2.4 ಸೆಕೆಂಡುಗಳಲ್ಲಿ 60 ಕಿ.ಮೀ ಮುಟ್ಟಬಲ್ಲದು. ಈ ಕಾರನ್ನು ಕ್ರಿಸ್ಟಿಯಾನೊ ರೊನಾಲ್ಡೊಗೆ 2021 ರೊಳಗೆ ತಲುಪಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *