ವಿಟ್ಲ: ಲವ್’ ಮಾಡಿ ಮದುವೆಯಾದ ದ್ವೇಷ: `ಕಿಡ್ನಾಪ್’ ಆರೋಪಿ ಬ್ಲೇಡ್ ಸಾದಿಕ್ ಅರೆಸ್ಟ್!

ಮಂಗಳೂರು: ಯುವತಿಯೋರ್ವಳನ್ನು ಲವ್ ಮಾಡಿ ಮದುವೆಯಾದ ಎಂಬ ಕಾರಣಕ್ಕೆ ದ್ವೇಷ ಬೆಳೆದು ಕುಖ್ಯಾತ ಕ್ರಿಮಿನಲ್ ಓರ್ವ ತನ್ನ ಸಹಚರರ ಜೊತೆ ಸೇರಿಕೊಂಡು ಯುವಕನೋರ್ವನನ್ನು ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಬಂಧನಕ್ಕೊಳಗಾದವನು.
ಘಟನೆಯ ವಿವರ:
ಜುಲೈ 29ರಂದು ಘಟನೆ ನಡೆದಿದ್ದು ಪುಣಚ ನಿವಾಸಿ ಅಬ್ದುಲ್ ಬಶೀರ್ ವಿಟ್ಲ ಎಂಪೈರ್ ಮಾಲ್ ಗೆ ಬಟ್ಟೆ ಕೊಳ್ಳಲೆಂದು ಬಂದಿದ್ದರು. ಈ ವೇಳೆ ಬಶೀರ್ ಗೆ ಪರಿಚಿತನಾದ ಸಿದ್ದಿಕ್ ಎಂಬಾತ ಮಾತನಾಡುವ ಉದ್ದೇಶದಿಂದ ನನ್ನ ಜೊತೆ ಬಾ ಎಂದು ಕರೆದಿದ್ದ. ಸ್ಕಾರ್ಪಿಯೋ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಕಾರಿನಲ್ಲಿ ಬ್ಲೇಡ್ ಸಾದಿಕ್ ಕುಳಿತಿದ್ದನ್ನು ಕಂಡು ಕಾರ್ ಹತ್ತಲು ಬಶೀರ್ ಹಿಂಜರಿದಾಗ ಇಬ್ಬರೂ ಸೇರಿಕೊಂಡು ಬಶೀರ್ ನನ್ನು ಕಾರಿನೊಳಗೆ ದೂಡಿ ಪುತ್ತೂರು ಕಡೆಗೆ ಅಪಹರಿಸಿಕೊಂಡು ಹೋಗಿದ್ದರು. ಬೊಬ್ಬೆ ಹೊಡೆದರೆ ಕೊಲ್ಲುವುದಾಗಿ ಬಶೀರ್ ಕೆನ್ನೆಗೆ ಬ್ಲೇಡ್ ಸಾದಿಕ್ ಹೊಡೆದಿದ್ದ. ಕಾರ್ ಕಂಬಳಬೆಟ್ಟು ಬಳಿ ನಿಲ್ಲಿಸಿದ್ದ ವೇಳೆ ಬಶೀರ್ ಕಾರಿನಿಂದ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ನಂತರ ಸಾದಿಕ್ ಪದೇ ಪದೇ ಬಶೀರ್ ಮೊಬೈಲ್ ಗೆ ಮೆಸೇಜ್ ಮತ್ತು ಕರೆ ಮಾಡಿ ಕೊಲ್ಲವುದಾಗಿ ಬೆದರಿಕೆ ಹಾಕುತ್ತಿದ್ದ. ಅಬೂಬಕರ್ ಎಂಬವರ ಮಗಳನ್ನು ಬಶೀರ್ ಲವ್ ಮಾಡಿ ಮದುವೆಯಾದ ವಿಚಾರದಲ್ಲಿ ಸಾದಿಕ್ ಮತ್ತು ಸಿದ್ದಿಕ್ ಪೂರ್ವದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಕಿಡ್ನಾಪ್ ಮಾಡಿದ್ದಾಗಿ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಾರ್ಯಾಚರಣೆ ನಡೆಸಿದ ವಿಟ್ಲ ಎಸ್.ಐ. ವಿನೋದ್ ರೆಡ್ಡಿ ಅವರು ಆರೋಪಿ ಬ್ಲೇಡ್ ಸಾದಿಕ್ ನನ್ನು ಇಂದು ವಿಟ್ಲದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಾದಿಕ್ ಮೇಲೆ ವಿಟ್ಲದಲ್ಲಿ 10, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 1, ಪುತ್ತೂರು ಟೌನ್ 2, ಉಪ್ಪಿನಂಗಡಿ 1 ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಪುತ್ತೂರಿನಲ್ಲಿ ಒಬ್ಬರನ್ನು ಶೂಟ್ ಔಟ್ ಮಾಡಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಸಾದಿಕ್ ಕಳೆದ ತಿಂಗಳು ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *