ರೈನಾ ವಿರುದ್ಧ ಶ್ರೀನಿ ಬಹಿರಂಗ ಸಮರ: ರೂಮ್ ವಿಚಾರಕ್ಕೆ ಖ್ಯಾತೆ ತೆಗೆದ ರೈನಾ!

ದೆಹಲಿ: ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ನಲ್ಲಿ ಬೇರೆಯದ್ದೇ ರೀತಿಯಲ್ಲಿ ಸುದ್ದಿಗೆ ಕಾರಣವಾಗುತ್ತಿದೆ. 13ನೇ ಆವೃತ್ತಿಗಾಗಿ ದುಬೈಗೆ ಬಂದಿಳಿದಿರುವ ಸಿಎಸ್ಕೆ ತಂಡಕ್ಕೆ ತರಬೇತಿ ಶಿಬಿತ ಆರಂಭವಾಗುವ ಮುನ್ನವೇ ಕೊರೊನಾ ವೈರಸ್ ಆಘಾತ ನೀಡಿದೆ. ಅದರ ಬೆನ್ನಲ್ಲೇ ಸುರೇಶ್ ರೈನಾ ಭಾರತಕ್ಕೆ ವಾಪಾಸ್ಸಾಗುವ ಮೂಲಕ ಮತ್ತೊಂದು ಆಘಾತ ಎದುರಾಯಿತು. ಆದರೆ ಸದ್ಯ ಸುರೇಶ್ ರೈನಾ ಭಾರತಕ್ಕೆ ಮರಲಿರುವ ವಿಚಾರ ಈಗ ಬೇರೆಯದ್ದೇ ಆಯಾಮ ಪಡೆದುಕೊಳ್ಳುತ್ತಿದ್ದು, ವಿಚಾರ ತಿರುವು ಪಡೆದುಕೊಂಡಿದೆ.
ಕೌಟುಂಬಿಕ ಕಾರಣಗಳಿಂದ ಸುರೇಶ್ ರೈನಾ ಹೊರ ಭಾರತಕ್ಕೆ ಮರಳುತ್ತಿದ್ದಾರೆ ಎಂದು ಹೇಳಲಾಗಿತ್ತಾದರೂ ಚೆನ್ನೈ ಮಾಲಕ ಎನ್ ಶ್ರೀನಿವಾಸನ್ (ಶ್ರೀನಿ) ಆಡಿರುವ ಮಾತುಗಳು ಬೇರೆಯದ್ದೇ ರೀತಿಯಲ್ಲಿ ಧ್ವನಿಸುತ್ತಿದೆ. ಇದರ ಬೆನ್ನಲ್ಲೇ ಸುರೇಶ್ ರೈನಾ ರೂಮ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿಎಸ್ಕೆ ತಂಡ ಆಗಸ್ಟ್ 21ರಂದು ದುಬೈಗೆ ಬಂದಿಳಿಯಿತು. ಆದರೆ ದುಬೈನಲ್ಲಿ ತನಗೆ ನೀಡಿರುವ ರೂಮ್ ಬಗ್ಗೆ ಸುರೇಶ್ ರೈನಾ ಅಸಮಾಧಾನಗೊಂಡಿದ್ದರು. ಕೊರೊನಾ ವೈರಸ್ನ ಕಾರಣದಿಂದಾಗಿ ಸಾಕಷ್ಟು ಕಠಿಣ ಪ್ರೊಟೊಕಾಲ್ ಇರುವ ಕಾರಣ ಚೆನ್ನೈ ನಾಯಕ ಧೋನಿಗೆ ನೀಡಿದ ಗುಣಮಟ್ಟದ ರೂಮ್ ನೀಡಬೇಕೆಂದು ಸುರೇಶ್ ರೈನಾ ಕೇಳಿಕೊಂಡಿದ್ದರು. ಇದೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸುರೇಶ್ ರೈನಾ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ ಎಂಬ ವರದಿಗಳು ಬರುತ್ತಿದೆ. ಸಿಎಸ್ಕೆ ತಂಡ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ ಕಾರಣ ಎಲ್ಲಾ ಆಟಗಾರರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್ ರೈನಾಗೆ ನೀಡಿದ ರೂಮ್ನಲ್ಲಿ ಸರಿಯಾದ ಬಾಲ್ಕನಿ ಇಲ್ಲದಿರುವುದು ರೈನಾ ಅಸಮಾಧಾನಕ್ಕೆ ಕಾರಣವಾಯಿತು. ಈ ಅಸಮಾಧಾನವೇ ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಜಗಳಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಸ್ಎ ಮುಖ್ಯಸ್ಥ ಎನ್ ಶ್ರೀನಿವಾಸನ್ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ. ರೂಮ್ ವಿಚಾರವಾಗಿ ನಾಯಕ ಧೋನಿಗೆ ರೈನಾರನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲವೂ ನಿಯಂತ್ರಣ ತಪ್ಪಿದವು. ಇದೇ ಸಂದರ್ಭದಲ್ಲಿ ಚೆನ್ನೈ ತಂಡದ ಇಬ್ಬರು ಆಟಗಾರರು ಕೊರೊನಾ ವೈರಸ್ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಇದು ರೈನಾ ಮತ್ತಷ್ಟು ಆತಂಕಗೊಳ್ಳಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಯಶಸ್ಸು ತಲೆಗೇರಿದಾಗ ಹೀಗೆ ಆಗುತ್ತದೆ: ಶ್ರೀನಿ
ಈ ನಡುವೆ ಆಂಗ್ಲ ಪತ್ರಿಕೆಯೊಂದು ರೈನಾ ವಿರುದ್ಧ ಶ್ರೀನಿವಾಸನ್ ಕಿಡಿ ಕಾರಿರುವ ಸಂಗತಿಯನ್ನು ಬಹಿರಂಗ ಪಡಿಸಿದೆ. ಈ ಸಂಬಂಧ ವರದಿ ಮಾಡಿರುವ ಸುದ್ಧಿ ಮಾಧ್ಯಮ, ತನ್ನ ನಿರ್ಧಾರಕ್ಕೆ ಸುರೇಶ್ ರೈನಾ ಖಂಡಿತಾ ಮರುಕ ಪಡುತ್ತಾರೆ. ಹಾಗೂ ತಾನು ಕಳೆದುಕೊಳ್ಳುವ ಸಂಗತಿಗಳು ಹಾಗೂ ಹಣದ ಬಗ್ಗೆ ಅವರು ಅರಿತುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್ ಪ್ರತಿಕ್ರಿಯಿಸಿದ್ದಾರೆ. ಯಶಸ್ಸು ತಲೆಗೆ ಹತ್ತಿದರೆ ಹೀಗಾಗುತ್ತದೆ. ನನ್ನ ಅಭಿಪ್ರಾಯವೇನೆಂದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿರದಿದ್ದರೆ, ಹಿಂತಿರುಗಿ. ನಾನು ಯಾರನ್ನೂ ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ” ಎಂದು ಶ್ರೀನಿವಾಸನ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.